ಜು.1ರಿಂದ ಜಿಎಸ್‌ಟಿ ಜಾರಿಗೆ ಸಕಲ ಸಿದ್ಧತೆ: ಸಿದ್ದರಾಮಯ್ಯ

ಬೆಂಗಳೂರು, ಮೇ 3: ಬರುವ ಜುಲೈ 1ರಿಂದ ಸರಕು ಸೇವಾ ತೆರಿಗೆ (ಜಿಎಸ್ಟಿ)ಯನ್ನು ಸಂಪೂರ್ಣವಾಗಿ ಜಾರಿಗೊಳಿಸಲು ರಾಜ್ಯ ಸರಕಾರ ಸಕಲ ಸಿದ್ಧತೆ ನಡೆಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬುಧವಾರ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಶತಮಾನೋತ್ಸವ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಜಿಎಸ್ಟಿಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಎಲ್ಲ ರೀತಿಯ ತರಬೇತಿ ನೀಡಲಾಗಿದೆ ಎಂದು ತಿಳಿಸಿದರು.
ಈ ಹಿಂದೆ ಹಣಕಾಸು ಸಚಿವನಾಗಿದ್ದಾಗ 96 ತೆರಿಗೆಗಳು ಇದ್ದವು. ಅವುಗಳನ್ನು 4ಕ್ಕೆ ಇಳಿಸಿದ್ದೇನೆ. ಆ ಮೂಲಕ ಕೈಗಾರಿಕೆಗಳ ಬೆಳವಣಿಗೆಗೆ ರಾಜ್ಯ ಸರಕಾರ ಎಲ್ಲ ರೀತಿಯ ಉತ್ತೇಜನ ನೀಡುತ್ತಿದೆ. ಈ ಬಾರಿಯ ಬಜೆಟ್‌ನಲ್ಲೂ ಕೈಗಾರಿಕೆಗಳ ಅಭಿವೃದ್ಧಿಗೆ ಅಗತ್ಯವಾದ ಬಹುತೇಕ ಬೇಡಿಕೆಯನ್ನು ಈಡೇರಿಸಿದ್ದೇವೆ ಎಂದು ಅವರು ತಿಳಿಸಿದರು
ಕೈಗಾರಿಕೆಗಳಿಗೆ ಅಗತ್ಯವಾದ ಕುಶಲಕರ್ಮಿಗಳನ್ನು ಒದಗಿಸಲು ಕೌಶಲ್ಯಾಭಿವೃದ್ಧಿ ನಿಗಮವನ್ನು ತನ್ನ ಅಧ್ಯಕ್ಷತೆಯಲ್ಲೇ ರಚಿಸಲಾಗಿದೆ. ಈ ವರ್ಷ 5 ಲಕ್ಷ ಯುವಕ, ಯುವತಿಯರಿಗೆ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ನೀಡಲಾಗುವುದು. ಹಾಗೆಯೇ ಕಾಸಿಯಾಗೆ ಕೌಶಲ್ಯಾಭಿವೃದ್ಧಿಗಾಗಿಯೇ 5 ಕೋಟಿ ರೂ.ಗಳನ್ನು ಬಜೆಟ್‌ನಲ್ಲಿ ಒದಗಿಸಿದ್ದೇನೆ ಎಂದು ಅವರು ಹೇಳಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಆಡಳಿತಾವಧಿಯಲ್ಲಿ ಎಫ್‌ಕೆಸಿಸಿಐ ಸ್ಥಾಪನೆಯಾಗಿ, ರಾಜ್ಯದ ಕೈಗಾರಿಕಾಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡುತ್ತಿದೆ. ಹೀಗಾಗಿ ರಾಜ್ಯ ಸರಕಾರ ಎಫ್‌ಕೆಸಿಸಿಐಗೆ ಅಗತ್ಯವಾದ ಎಲ್ಲ ರೀತಿಯ ನೆರವನ್ನು ನೀಡಲು ಸಿದ್ಧವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಎಫ್‌ಕೆಸಿಸಿಐನ 27 ಮಂದಿ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಅಧ್ಯಕ್ಷರಾದ ಎಂ.ಕೆ. ದಿನೇಶ್‌ರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಆತ್ಮೀಯವಾಗಿ ಸನ್ಮಾನಿಸಿದರು. ಸಮಾರಂಭದಲ್ಲಿ ಬೃಹತ್ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ, ಎಫ್‌ಕೆಸಿಸಿಐ ಅಧ್ಯಕ್ಷ ಎಂ.ಸಿ. ದಿನೇಶ್, ಹಿರಿಯ ಉಪಾಧ್ಯಕ್ಷ ರವಿ, ಆನಂದಿ ಸುರೇಶ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.