ಕುಡಿಯುವ ನೀರಿಗೆ ಅಧಿಕ ಬೆಲೆ: ಪ್ರತಿಷ್ಠಿತ ಮಾಲ್‌ಗಳ ಮೇಲೆ ದಾಳಿ

ಬೆಂಗಳೂರು, ಮೇ 3: ಪ್ರತಿ ಲೀಟರ್ ಕುಡಿಯುವ ನೀರಿಗೆ ನಿಗದಿಗಿಂತ ಅಧಿಕ ದರ ವಸೂಲಿ ಮಾಡಲಾಗುತ್ತಿದೆ ಎನ್ನುವ ದೂರುಗಳು ಹೆಚ್ಚಾದ ಬೆನ್ನಲ್ಲೇ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ನಗರದಲ್ಲಿರುವ ಪ್ರತಿಷ್ಠಿತ ಮಾಲ್‌ಗಳ ಮೇಲೆ ದಿಢೀರ್ ದಾಳಿ ನಡೆಸಿದರು.
ಬುಧವಾರ ನಗರ ವ್ಯಾಪ್ತಿಯಲ್ಲಿರುವ 4 ಪ್ರತಿಷ್ಠಿತ ಮಾಲ್ ಗಳ ಮೇಲೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ಆಯುಕ್ತ ಶಿವಪ್ರಸಾದ್ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಲಾಯಿತು.
ಮಾಲ್ ಗಳಲ್ಲಿ ಕುಡಿಯುವ ನೀರಿಗೆ ಬಾಟಲಿಗೆ ಹೆಚ್ಚು ಹಣ ಪಡೆಯುತ್ತಿರುವುದಾಗಿ ಸಾರ್ವಜನಿಕರು ಆರೋಪಿಸಿದ್ದ ಹಿನ್ನೆಲೆಯಲ್ಲಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಯು.ಟಿ.ಖಾದರ್ ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಹೀಗಾಗಿ ಅಧಿಕಾರಿಗಳು ದಿಢೀರ್ ದಾಳಿ ಮಾಡಿ ಪರಿಶೀಲಿಸಿದರು.
ಯಾವುದೇ ಕಾರಣಕ್ಕೂ ಗ್ರಾಹಕರಿಂದ ಕುಡಿಯುವ ನೀರಿಗೆ ಹೆಚ್ಚು ಹಣ ವಸೂಲಿ ಮಾಡಬಾರದು. ಒಂದು ವೇಳೆ ಮಾಡಿದರೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಮಾಲ್ ಗಳ ಮುಖ್ಯಸ್ಥರಿಗೆ ಅಧಿಕಾರಿಗಳು ಎಚ್ಚರಿಕೆ ನೀಡಿದರು.





