ಬ್ಯಾಂಕ್ ಸಾಲ ವಂಚನೆ ಪ್ರಕರಣ : ಕಂಪನಿ ನಿರ್ದೇಶಕನ ಬಂಧನ

ಹೊಸದಿಲ್ಲಿ,ಮೇ 3: 2,650 ಕೋ.ರೂ ಬ್ಯಾಂಕ್ ಸಾಲ ವಂಚನೆ ಪ್ರಕರಣದಲ್ಲಿ ಹಣ ಚಲುವೆ ಆರೋಪದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ(ಇಡಿ)ವು ಇಂದೋರ್ ಮತ್ತು ಮುಂಬೈಗಳಲ್ಲಿ ಕಾರ್ಯಾಚರಿಸುತ್ತಿರುವ ಝೂಮ್ ಡೆವಲಪರ್ಸ್ ಪ್ರೈ.ಲಿ.ನ ನಿರ್ದೇಶಕ ಮತ್ತು ಪ್ರವರ್ತಕ ವಿಜಯ ಎಂ.ಚೌಧರಿಯನ್ನು ಮಂಗಳವಾರ ರಾತ್ರಿ ಮುಂಬೈನಲ್ಲಿ ಬಂಧಿಸಿದೆ. ಇದು ಇಡಿ ತನಿಖೆ ನಡೆಸುತ್ತಿರುವ ಅತ್ಯಂತ ದೊಡ್ಡ ಬ್ಯಾಂಕ್ ವಂಚನೆ ಪ್ರಕರಣಗಳಲ್ಲೊಂದು ಎಂದು ಹೇಳಲಾಗಿದೆ.
ಚೌಧರಿ ಮತ್ತು ಆತನ ಕಂಪನಿ 25 ಬ್ಯಾಂಕ್‌ಗಳಿಗೆ 2,650 ಕೋ.ರೂ.ಗಳನ್ನು ವಂಚಿಸಿದೆ ಎಂದು ಇಡಿ ತಿಳಿಸಿದೆ.
ಸಿಬಿಐ ದಾಖಲಿಸಿಕೊಂಡಿರುವ ಎಫ್‌ಐಆರ್‌ನ ಆಧಾರದಲ್ಲಿ ಇಡಿಯು ಹಣ ಚಲುವೆ ತಡೆ ಕಾಯ್ದೆ(ಪಿಎಂಎಲ್‌ಎ)ಯಡಿ ಚೌಧರಿ ವಿರುದ್ಧ ಪ್ರಕರಣವನ್ನು ದಾಖಲಿಸಿ ಕೊಂಡಿತ್ತು. 2015ರಲ್ಲಿ ದಕ್ಷಿಣ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿಯ 1,280 ಎಕರೆ ಭೂಮಿಯನ್ನು ವಶಪಡಿಸಿಕೊಂಡಿತ್ತು.
ತನ್ನ ಮತ್ತು ತನ್ನ ಸಹಚರರ ಹೆಸರುಗಳಲ್ಲಿ 485 ಕಂಪನಿಗಳನ್ನು ಹುಟ್ಟುಹಾಕಿರುವ ಚೌಧರಿ ಈ ವಂಚನೆ ಪ್ರಕರಣದ ಮುಖ್ಯ ರೂವಾರಿಯಾಗಿದ್ದಾನೆ ಎಂದು ಇಡಿ ಹೇಳಿದೆ. ಅದು ಈ ಪ್ರಕರಣದಲ್ಲಿ ಈವರೆಗೆ 130 ಕೋ.ರೂ.ವೌಲ್ಯದ ಆಸ್ತಿಗಳನ್ನು ವಶಪಡಿಸಿಕೊಂಡಿದೆ.







