ಕೂಡ್ಲೂರಿನಲ್ಲಿ ಬಿಎಸ್‌ಎಫ್ ಯೋಧ ಪುಟ್ಟಸ್ವಾಮಿ ಅಂತ್ಯಕ್ರಿಯೆ

ಚಾಮರಾಜನಗರ, ಮೇ 3: ಜಮ್ಮು ಗಡಿಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ ಬಿಎಸ್‌ಎಫ್ ಯೋಧನ ಅಂತ್ಯಕ್ರಿಯೆ ಸಕಲ ಸರಕಾರಿ ಗೌರವಗಳೊಂದಿಗೆ ಚಾಮರಾಜನಗರ ತಾಲ್ಲೂಕಿನ ಕೂಡ್ಲೂರಿನಲ್ಲಿ ನಡೆಯಿತು.
ದೇಶದ ಗಡಿ ಕಾಯುತ್ತಿದ್ದ ಚಾಮರಾಜನಗರ ಜಿಲ್ಲೆಯ ಯೋಧ ಪುಟ್ಟಸ್ವಾಮಿ ರವಿವಾರ ಹೃದಯಾಘಾತಕ್ಕೊಳಗಾಗಿದ್ದರು. ಈ ಸಂದರ್ಭ ಅವರನ್ನು ಮಿಲಿಟರಿ ಆಸ್ಪತ್ರೆಗೆ ದಾಖಲಿಸಿ ಅಲ್ಲಿನ ವೈದ್ಯರು ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಮೃತಪಟ್ಟರು. ಇವರ ಮೃತದೇಹ ಮಂಗಳವಾರ ಮಧ್ಯಾಹ್ನದ ವೇಳೆಗೆ ಬೆಂಗಳೂರಿಗೆ ಬಂದು ತಡರಾತ್ರಿ ಚಾಮರಾಜನಗರ ತಾಲ್ಲೂಕಿನ ಕೂಡ್ಲೂರಿಗೆ ಸಕಲಗೌರವಗಳೊಂದಿಗೆ ಆಗಮಿಸಿತು.
ಕೂಡ್ಲೂರು ಗ್ರಾಮದ ಹೊರವಲಯಲ್ಲಿರುವ ಜಮೀನಿನಲ್ಲಿ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಲಾಯಿತು. ಲೋಕಸಭಾ ಸದಸ್ಯ ಆರ್.ದೃವನಾರಾಯಣ್, ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಎಂ.ಸಿ. ಮೋಹನಕುಮಾರಿ, ಜಿಪಂ ಅಧ್ಯಕ್ಷ ರಾಮಚಂದ್ರ, ಉಪಾಧ್ಯಕ್ಷ ಬಸವರಾಜು, ಜಿಲ್ಲಾಧಿಕಾರಿ ಬಿ.ರಾಮು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್‌ಕುಮಾರ್ ಆರ್.ಜೈನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗೀತಾ ಹಾಗೂ ಬಿ.ಎಸ್.ಎಫ್. ಯೋಧರು ಅಂತಿಮ ನಮನ ಸಲ್ಲಿಸಿದರು.





