ಕುಡಿಯುವ ಬಾಟಲ್ ನೀರಿಗೆ ಹೆಚ್ಚಿನ ಹಣ ಪಡೆದರೆ ಆರು ತಿಂಗಳ ಶಿಕ್ಷೆ: ಯು.ಟಿ.ಖಾದರ್

ಬೆಂಗಳೂರು, ಮೇ 3: ಕುಡಿಯುವ ನೀರಿನ ಬಾಟಲ್‌ಗಳಿಗೆ ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡಿದರೆ 2ಸಾವಿರ ರೂ.ದಂಡ ಹಾಗೂ 6ತಿಂಗಳ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಯು.ಟಿ.ಖಾದರ್ ಎಚ್ಚರಿಕೆ ನೀಡಿದ್ದಾರೆ.
ಬುಧವಾರ ವಿಕಾಸಸೌಧದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದೆಲ್ಲೆಡೆ ಮಲ್ಟಿಪ್ಲೆಕ್ಸ್, ಹೊಟೇಲ್ ಹಾಗೂ ಮಾಲ್‌ಗಳಲ್ಲಿ ಕುಡಿಯುವ ನೀರಿನ ಬಾಟಲ್‌ಗಳಿಗೆ ನಿಗದಿತ ಬೆಲೆಗಿಂತ ಹೆಚ್ಚುವರಿ ಹಣ ಪಡೆಯಲಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಆಹಾರ ಇಲಾಖೆಯ ಅಧಿಕಾರಿಗಳು ಇಂದು ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ಆಹಾರ ಇಲಾಖೆಯ ಅಧಿಕಾರಿಗಳು ಒಟ್ಟು 39ತಂಡಗಳನ್ನು ರಚಿಸಿಕೊಂಡು ರಾಜ್ಯದೆಲ್ಲೆಡೆ ಏಕಕಾಲದಲ್ಲಿ ಹೊಟೇಲ್, ಮಾಲ್ ಹಾಗೂ ಮಲ್ಟಿಪ್ಲೆಕ್ಸ್‌ಗಳ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ 20ರೂ.ಇದ್ದ ಬಾಟಲ್ ನೀರನ್ನು 50ರೂ.ಗೆ ಮಾರಾಟ ಮಾಡಿದ್ದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಸುಮಾರು 50ಕ್ಕಿಂತ ಹೆಚ್ಚು ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಬೆಂಗಳೂರಿನ ಮಂತ್ರಿಮಾಲ್, ಯುಬಿ ಸಿಟಿ, ಒರಾಯನ್, ಫೋರಂ, ಗರುಡಾ ಮಾಲ್‌ಗಳಿಗೆ ಇಲಾಖೆಯ ಜಂಟಿ ಆಯುಕ್ತ ಶಿವಪ್ರಸಾದ್ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿ, ನಿಗದಿತ ಬೆಲೆಗಿಂತ ಹೆಚ್ಚು ಹಣಕ್ಕೆ ಮಾರಾಟ ಮಾಡುತ್ತಿದ್ದ ನೀರಿನ ಬಾಟಲ್‌ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಬಸ್ ನಿಲ್ದಾಣಗಳಲ್ಲಿಯೂ ಕುಡಿಯುವ ನೀರು ಹಾಗೂ ಆಹಾರ ಪದಾರ್ಥಗಳಿಗೆ ಹೆಚ್ಚುವರಿ ಹಣ ಪಡೆಯಲಾಗುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ. ಹೀಗಾಗಿ ಮೊದಲು ಮಾಲ್ ಹಾಗೂ ಮಲ್ಟಿಪ್ಲೆಕ್ಸ್‌ಗಳ ಮೇಲೆ ದಾಳಿ ಮಾಡಿದ್ದೇವೆ. ನಂತರದಲ್ಲಿ ಎಲ್ಲ ಅಂಗಡಿ ಮಳಿಗೆಗಳ ಮೇಲೆ ದಾಳಿ ಮಾಡಿ ಪ್ರಕರಣ ದಾಖಲಿಸಲಾಗುವುದು ಎಂದು ಅವರು ಹೇಳಿದರು.
ಸೇವಾ ಶುಲ್ಕ ಇಲ್ಲ: ಹೊಟೇಲ್, ಮಲ್ಟಿಪ್ಲೆಕ್ಸ್ ಹಾಗೂ ಮಾಲ್‌ಗಳಲ್ಲಿ ಸೇವಾ ಶುಲ್ಕವನ್ನು ವಿಧಿಸುವುದನ್ನು ಸರಕಾರ ರದ್ದು ಪಡಿಸಿದೆ. ಕೇವಲ ಗ್ರಾಹಕರು ತಮಗೆ ತೋಚಿದಷ್ಟು ಹಣವನ್ನು ಸೇವಾಶುಲ್ಕವಾಗಿ ನೀಡಬಹುದೇ ಹೊರತು, ಇಷ್ಟೇ ಕೊಡಬೇಕೆಂದು ಕಡ್ಡಾಯ ಮಾಡುವಂತಿಲ್ಲ. ಈ ಬಗ್ಗೆ ದೂರುಗಳು ಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಅಗತ್ಯ ವಸ್ತುಗಳ ನಿಯಂತ್ರಣ ಕಾಯ್ದೆಯಡಿ ನೀರನ್ನು ಸೇರಿಸಿಲ್ಲ. ಹೀಗಾಗಿ ನೀರಿನ ಬಾಟಲ್‌ಗಳ ಬೆಲೆಯನ್ನು ಮನಸೋ ಇಚ್ಛೆ ಹೆಚ್ಚಳ ಮಾಡಲಾಗುತ್ತಿದೆ. ಈ ಬಗ್ಗೆ ಕೇಂದ್ರ ಸರಕಾರಕ್ಕೆ ಪತ್ರ ಬರೆದು ನೀರನ್ನು ಅಗತ್ಯ ವಸ್ತುಗಳ ನಿಯಂತ್ರಣ ಕಾಯ್ದೆಯಡಿ ಸೇರಿಸಬೇಕೆಂದು ಮನವಿ ಮಾಡಲಾಗುವುದು.
-ಯು.ಟಿ.ಖಾದರ್ ಸಚಿವ, ಆಹಾರ ಮತ್ತು ನಾಗರಿಕ ಸರಬರಾಜು







