ಸೈನಿಕರ ಶಿರಚ್ಛೇದ ಪ್ರಕರಣ: ಪಾಕ್ ಸೇನೆಯ ವಿರುದ್ಧ ಬಲವಾದ ಸಾಕ್ಷಿಯಿದೆ: ಭಾರತದ ಹೇಳಿಕೆ

ಹೊಸದಿಲ್ಲಿ, ಮೇ 3: ಇಬ್ಬರು ಭಾರತೀಯ ಯೋಧರ ಶಿರಚ್ಚೇದ ನಡೆಸಿದ ಬಗ್ಗೆ ಪಾಕ್ ಸೇನೆಯ ವಿರುದ್ಧ ಬಲವಾದ ಸಾಕ್ಷಿಯಿದೆ ಎಂದು ವಿದೇಶ ವ್ಯವಹಾರ ಸಚಿವಾಲಯದ ವಕ್ತಾರ ಗೋಪಾಲ್ ಬಾಗ್ಲೆ ತಿಳಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಾಕ್ ಸೇನೆ ಈ ಕಾರ್ಯ ನಡೆಸಿದೆ ಎಂಬುದಕ್ಕೆ ನಮ್ಮ ಬಳಿ ಸಾಕ್ಷಿಯಿದೆ. ಈ ಹೇಯ ಕೃತ್ಯ ನಡೆಸಿದ ಯೋಧರನ್ನು ಪತ್ತೆಹಚ್ಚಿ ಅವರನ್ನು ಶಿಕ್ಷಿಸಬೇಕು ಎಂದು ಪಾಕ್ ಸೇನೆಯನ್ನು ಒತ್ತಾಯಿಸಿದರು.
ಇದಕ್ಕೂ ಮುನ್ನ ಪಾಕ್ ರಾಯಭಾರಿ ಅಬ್ದುಲ್ ಬಾಸಿತ್ ಅವರನ್ನು ಕಚೇರಿಗೆ ಕರೆಸಿಕೊಂಡ ವಿದೇಶ ವ್ಯವಹಾರ ಸಚಿವಾಲಯದ ಕಾರ್ಯದರ್ಶಿ ಎಸ್.ಜಯಶಂಕರ್ ಘಟನೆಗೆ ಭಾರತದ ತೀವ್ರ ಪ್ರತಿರೋಧವನ್ನು ಸಲ್ಲಿಸಿದರು. ಬಳಿಕ ಮಾಧ್ಯಮದವರು ಕೇಳಿದ ಯಾವುದೇ ಪ್ರಶ್ನೆೆ ಉತ್ತರಿಸಲು ಬಾಸಿತ್ ನಿರಾಕರಿಸಿದರು.
ಘಟನೆಯಲ್ಲಿ ಪಾಕ್ ಸೇನೆ ಶಾಮೀಲಾಗಿದೆ ಎಂಬುದನ್ನು ಸಹಜವಾಗಿಯೇ ಪಾಕ್ ರಾಯಭಾರಿ ನಿರಾಕರಿಸಿದರು. ಆದರೂ ಭಾರತದ ಆಗ್ರಹವನ್ನು ಪಾಕ್ ಸರಕಾರಕ್ಕೆ ತಲುಪಿಸುವುದಾಗಿ ತಿಳಿಸಿದರು ಎಂದು ಗೋಪಾಲ್ ಬಾಗ್ಲೆ ಹೇಳಿದ್ದಾರೆ.
ಪಾಕಿಸ್ತಾನಕ್ಕೆ ನೀಡಿರುವ ‘ಪರಮಾಪ್ತ ದೇಶ ’ ಸ್ಥಾನಮಾನವನ್ನು ಹಿಂತೆಗೆದುಕೊಳ್ಳುವ ಬಗ್ಗೆ ಭಾರತ ಯೋಚಿಸುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇದು ಡಬ್ಲೂಟಿಒ (ವಿಶ್ವ ವ್ಯಾಪಾರ ಸಂಘಟನೆ)ಯ ಒಂದು ಬಾಧ್ಯತೆಯಾಗಿದೆ. ಕೇವಲ ಪಾಕ್ ಜೊತೆ ಮಾತ್ರವಲ್ಲ, ಇತರ ಕೆಲವು ದೇಶಗಳಿಗೂ ಈ ಸ್ಥಾನಮಾನ ನೀಡಲಾಗಿದೆ ಎಂದು ಉತ್ತರಿಸಿದರು. ನಮ್ಮ ನಡೆಯಲ್ಲಿ ಯಾವುದೇ ಸಂದಿಗ್ಧತೆ ಇಲ್ಲ. ಇದನ್ನು ಅಂತಾರಾಷ್ಟ್ರೀಯ ಸಂವಾದಕರಿಗೆ ಸ್ಪಷ್ಟವಾಗಿ ತಿಳಿಸಲಾಗಿದೆ ಎಂದು ಬಾಗ್ಲೆ ತಿಳಿಸಿದರು.
ರಕ್ತದ ಕಲೆಗಳೇ ಸಾಕ್ಷಿ:
ಭಾರತೀಯ ಯೋಧರ ಶಿರಚ್ಚೇದ ನಡೆಸಿದ ದುಷ್ಕರ್ಮಿಗಳು ಈ ಪೈಶಾಚಿಕ ಕೃತ್ಯ ನಡೆಸಿದ ಬಳಿಕ ಪಾಕಿಸ್ತಾನಕ್ಕೆ ಮರಳಿರುವುದಕ್ಕೆ ಜಮ್ಮು-ಕಾಶ್ಮೀರದ ಗಡಿ ರೇಖೆಯ ಬಳಿ ಕೃತ್ಯ ನಡೆದ ಸ್ಥಳದಲ್ಲಿ ಬಿದ್ದಿರುವ ರಕ್ತದ ಕಲೆಗಳು ಸಾಕ್ಷಿಯಾಗಿದೆ ಎಂದು ಭಾರತದ ವಿದೇಶ ವ್ಯವಹಾರ ಇಲಾಖೆ ಬಿಡುಗಡೆಗೊಳಿಸಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಹುತಾತ್ಮರಾದ ಯೋಧರ ರಕ್ತದ ಸ್ಯಾಂಪಲ್ ಮತ್ತು ಘಟನೆ ನಡೆದ ಸ್ಥಳದಿಂದ ಗಡಿ ನಿಯಂತ್ರಣ ರೇಖೆಯ ಬಳಿ ಇರುವ ರೋಝಾ ನಾಲೆಯವರಿಗೆ ಬಿದ್ದಿರುವ ರಕ್ತದ ಕುರುಹುಗಳು ಇದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಆದರೆ ಇದನ್ನು ನಿರಾಕರಿಸಿರುವ ಪಾಕಿಸ್ತಾನ, ಕ್ರಮ ಕೈಗೊಳ್ಳಲು ಯೋಗ್ಯವಾದ ಪುರಾವೆಗಳನು್ನ ಒದಗಿಸುವಂತೆ ಭಾರತಕ್ಕೆ ತಿಳಿಸಿದೆ.







