ವೃತ್ತಿಧರ್ಮಕ್ಕೆ ದ್ರೋಹ ಬಗೆದ ಇನ್‌ಸ್ಪೆಕ್ಟರನ್ನು ಕೂಡಲೇ ವಜಾಗೊಳಿಸಿ: ಶಾಫಿ ಬೆಳ್ಳಾರೆ
ಕೊಣಾಜೆ ಇನ್‌ಸ್ಪೆಕ್ಟರ್ ಅಶೋಕ್‌ರನ್ನು ವಜಾಗೊಳಿಸುವಂತೆ ಆಗ್ರಹಿಸಿ ಧರಣಿ

ಕೊಣಾಜೆ, ಮೇ 3: ಕಾರ್ತಿಕ್‌ರಾಜ್ ಹತ್ಯೆಯಾದ ಬಳಿಕದ ಎಂಟು ತಿಂಗಳಲ್ಲಿ ಪೊಲೀಸರು ರಾತ್ರಿಯ ವೇಳೆ ಮುಸಲ್ಮಾನರ ಮನೆಗಳಿಗೆ ನುಗ್ಗಿ ವೃದ್ಧರು, ಮಹಿಳೆಯರು ಎನ್ನದೆ ದೌರ್ಜನ್ಯ ನಡೆಸಿದ್ದಾರೆ. ಅಲ್ಲದೆ ಬಲವಂತವಾಗಿ ಆಪಾದನೆಯನ್ನು ಒಪ್ಪಿಸುವಂತಹ ಪ್ರಯತ್ನಗಳು ಸತತವಾಗಿ ನಡೆದಿದ್ದವು. ಇನ್‌ಸ್ಪೆಕ್ಟರ್ ಅಶೋಕ್ ಅವರಿಗೆ ಸಾರ್ವಜನಿಕರು ಕುಟುಂಬ ಕಲಹದ ಬಗ್ಗೆ ಮಾಹಿತಿ ನೀಡಿದ್ದರೂ ಅಮಾಯಕರಿಗೆ ಹಿಂಸೆ ನೀಡಿ ಕುಟುಂಬಿಕರಿಗೆ ರಕ್ಷಣೆ ನೀಡಿದ್ದಾರೆ. ತಮ್ಮ ವೃತ್ತಿ ಧರ್ಮಕ್ಕೆ ದ್ರೋಹ ಬಗೆದ ಇಂತಹ ಇನ್‌ಸ್ಪೆಕ್ಟರನ್ನು ಕೂಡಲೇ ಸರಕಾರ ವಜಾಗೊಳಿಸಬೇಕು. ಅವರನ್ನು ವಜಾಗೊಳಿಸದಿದ್ದರೆ ಮುಂದಿನ ದಿನಗಳಲ್ಲಿ ಕಮಿಷನರ್ ಕಚೇರಿಯ ಮುಂದೆ ಪ್ರತಿಭಟನೆ ನಡೆಸಲಿದ್ದೇವೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಸಮಿತಿ ಸದಸ್ಯ ಶಾಫಿ ಬೆಳ್ಳಾರೆ ಎಚ್ಚರಿಸಿದರು.
ಕೊಣಾಜೆ ವಲಯ ನಾಗರಿಕ ಸಮಿತಿ ವತಿಯಿಂದ ಸ್ವಜನಪಕ್ಷಪಾತ ತೋರಿದ ಕೊಣಾಜೆ ಇನ್‌ಸ್ಪೆಕ್ಟರ್ ಅಶೋಕ್ ಅವರನ್ನು ಹುದ್ದೆಯಿಂದ ವಜಾಗೊಳಿಸುವಂತೆ ಆಗ್ರಹಿಸಿ ಕೊಣಾಜೆ ಪೊಲೀಸ್ ಠಾಣೆಯೆದುರು ನಡೆದ ಧರಣಿಯನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ತಿಕ್ ರಾಜ್ ಹತ್ಯೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಿ ಇದರಲ್ಲಿ ಇನ್‌ಸ್ಪೆಕ್ಟರ್ ಸ್ವಜನಪಕ್ಷಪಾತ ತೋರಿದ್ದು ರುಜುವಾತಾದಲ್ಲಿ ಅವರ ಮೇಲೂ ಕೊಲೆ ಮೊಕದ್ದಮೆಯನ್ನು ದಾಖಲಿಸಿ ಬಂಧಿಸಬೇಕು. ಪ್ರಕರಣಕ್ಕೆ ಸಂಬಂಧಿಸಿ ಶಿಹಾದ್ ಎಂಬ ಯುವಕನ್ನು ತನಿಖೆಯ ನೆಪದಲ್ಲಿ ವಶಕ್ಕೆ ತೆಗೆದು ಏಳು ದಿನಗಳ ಕಾಲ ಅಕ್ರಮವಾಗಿ ಬಂಧಿಸಿ ದೌರ್ಜನ್ಯ ನೀಡಿ ಬಲವಂತಾಗಿ ಒಪ್ಪಿಸುವ ಕೆಲಸ ನಡೆದಿತ್ತು. ಆದರೂ ಆತ ಒಪ್ಪದೇ ಇದ್ದಾಗ ಬೇರೆ ಕೇಸ್ ಹಾಕಿ ಬಂಧನದಲ್ಲಿಡಲಾಗಿತ್ತು. ಹೀಗೆ ಹಲವರ ಮೇಲೆ ದೌರ್ಜನ್ಯ ಎಸಗಲಾಗಿದ್ದು, ಇಂತಹ ಕೃತ್ಯಗಳಿಂದ ಪೊಲೀಸರ ಮೇಲೆ ಜನರು ನಂಬಿಕೆ ಕಳೆದುಕೊಳ್ಳುವಂತಾಗಿದೆ ಎಂದರು.
ಕಾರ್ತಿಕ್ ಹತ್ಯೆಯನ್ನು ರಾಜಕೀಯಗೊಳಿಸಲು ಯತ್ನಿಸಿದ್ದ ಸಂಸದ ನಳಿನ್ ಕುಮಾರ್ ಕಟೀಲ್ ಅವರ ನಾಲಗೆ ಆರೋಪಿಗಳು ಪತ್ತೆಯಾದ ಬಳಿಕ ಅಲುಗಾಡುತ್ತಿಲ್ಲ. ಅದಕ್ಕಿಂತ ಮುಂಚೆ ಕೊಣಾಜೆ ಠಾಣೆಯೆದುರು ನಡೆದ ಪ್ರತಿಭಟನೆಯಲ್ಲಿ ಜಿಲ್ಲೆಗೆ ಬೆಂಕಿ ಹಚ್ಚುವ ಹೇಳಿಕೆ ನೀಡಿದ್ದರು. ಇಂತವರನ್ನು ನಾವು ಸಂಸದರಾಗಿ ಆಯ್ಕೆ ಮಾಡಿ ಕಳುಹಿಸಿರುವುದು ದುರದೃಷ್ಟಕರ ಎಂದು ಹೇಳಿದರು.
ಮಾಜಿ ತಾಪಂ ಸದಸ್ಯ ಮುಸ್ತಫಾ ಹರೇಕಳ ಮಾತನಾಡಿ, ತನಿಖೆಯ ದಿಕ್ಕು ತಪ್ಪಿಸಲು ಸಂಘ ಪರಿವಾರದವರು ಘಟನೆಯನ್ನು ರಾಜಕೀಯ ಮಾಡಲು ಹೊರಟಿದ್ದರು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕೂಡಾ ಇದೊಂದು ಜಿಹಾದಿ ಕೃತ್ಯ ಎಂದು ಬಿಂಬಿಸಿದ್ದರು. ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿ ಹಲವಾರು ಹಿಂದೂ-ಮುಸ್ಲಿಂ ಯುವಕರನ್ನು ತನಿಖೆಯ ನೆಪದಲ್ಲಿ ಹಿಂಸಿಸಿದ್ದಾರೆ. ದಕ್ಷಿಣ ಕನ್ನಡದ ಜನರು ಎಚ್ಚೆತ್ತುಕೊಂಡಿದ್ದು, ಪೊಲೀಸರು ಕೂಡ ಜನರ ನಂಬಿಕೆಯನ್ನು ಉಳಿಸುವಂತಹ ಕೆಲಸವನ್ನು ಮಾಡಬೇಕಿದೆ ಎಂದರು.
ಧರಣಿಯಲ್ಲಿ ಸಲಫಿ ಮೂವ್‌ಮೆಂಟ್‌ನ ಇಸ್ಮಾಯಿಲ್ ಶಾಫಿ, ಕೋಮು ಸೌಹಾರ್ದ ವೇದಿಕೆಯ ಇಸ್ಮತ್ ಪಜೀರ್ ಮಾತನಾಡಿದರು.
ಎಸ್‌ಡಿಪಿಐಯ ಹಾರಿಸ್ ಮಲಾರ್, ಪಿಎಫ್ ಐ ಜಿಲ್ಲಾಧ್ಯಕ್ಷ ನವಾಝ್ ಉಳ್ಳಾಲ್, ಎಸ್‌ಡಿಪಿ ಮಂಗಳೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಅಬ್ಬಾಸ್ ಕಿನ್ಯ, ಎಸ್‌ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅತ್ತಾವುಲ್ಲಾ ಜೋಕಟ್ಟೆ, ಪಿಎಫ್ ಐ ಜಿಲ್ಲಾ ಸಮಿತಿಯ ಅಶ್ರಫ್ ಎ.ಕೆ. ಮೊದಲಾದವರು ಉಪಸ್ಥಿತರಿದ್ದರು.
ಬಳಿಕ ನಾಗರಿಕ ಸಮಿತಿ ವತಿಯಿಂದ ಕ್ರೈಂ ಡಿಸಿಪಿ ಸಂಜೀವ್ ಪಾಟೀಲ್ ಅವರಿಗೆ ಇನ್‌ಸ್ಪೆಕ್ಟರ್ ಅಶೋಕ್ ಅವರನ್ನು ವಜಾಗೊಳಿಸುವಂತೆ ಆಗ್ರಹಿಸಿ ಮನವಿ ಸಲ್ಲಿಸಲಾಯಿತು.







