ಮಂದಾರ್ತಿ: 36 ಜೋಡಿಗಳ ಸಾಮೂಹಿಕ ಮದುವೆ

ಮಂದಾರ್ತಿ, ಮೇ 3: ಸ್ಥಳೀಯ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ 16ನೇ ವರ್ಷದ ಉಚಿತ ಸಾಮೂಹಿಕ ವಿವಾಹದಲ್ಲಿ ರಾಜ್ಯದ ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ರಾಮನಗರ ಜಿಲ್ಲೆಗಳ 36 ಜೋಡಿಗಳು ಹಸೆಮಣೆ ಏರಿದರು.
ದೇವಸ್ಥಾನದ ಎದುರುಗಡೆ ಹಾಕಿದ ಸುಸಜ್ಜಿತ ಮಂಟಪದಲ್ಲಿ ವಧು-ವರ ಕುಟುಂಬಗಳ ಸದಸ್ಯರ ಸಮ್ಮುಖದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ಹಾಗೂ ವ್ಯವಸ್ಥಾಪನಾ ಸಮಿತಿಯ ಸದಸ್ಯ ಶ್ರೀಪತಿ ಅಡಿಗ ಅವರ ಪೌರೋಹಿತ್ಯದ ನೇತೃತ್ವದಲ್ಲಿ ಈ 36 ಜೋಡಿಗಳು ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ದೇವಸ್ಥಾನದ ವತಿಯಿಂದ 36 ವಧುವಿಗೆ ಕರಿಮಣಿ ಹಾಗೂ ಧಾರೆ ಸೀರೆ, ಮತ್ತು ವರನಿಗೆ ಶರ್ವಾನಿಯನ್ನು ಉಚಿತವಾಗಿ ನೀಡಲಾಯಿತು.
ಉಡುಪಿ ಜಿಲ್ಲೆಯ 23, ಶಿವಮೊಗ್ಗ ಜಿಲ್ಲೆಯಿಂದ 8, ಚಿಕ್ಕಮಗಳೂರಿನ 4 ಮತ್ತು ರಾಮನಗರದ ಒಂದು ಜೋಡಿ ಈ ಸರಳ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಇದರಲ್ಲಿ 15 ಜೋಡಿ ಪರಿಶಿಷ್ಟ ಪಂಗಡ, 9 ಜೋಡಿ ಪರಿಶಿಷ್ಟ ಜಾತಿ ಮತ್ತು 12 ಜೋಡಿ ಇತರೆ ವರ್ಗಕ್ಕೆ ಸೇರಿದ್ದರು.
ಮದುವೆ ಕಾರ್ಯಕ್ರಮಕ್ಕೆ ವಧು ವರರ ಕಡೆಯಿಂದ ಆಗಮಿಸಿದ ಸಾವಿರಕ್ಕೂ ಅಧಿಕ ಜನರಿಗೆ ದೇವಸ್ಥಾನದ ವತಿಯಿಂದ ಉಚಿತ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಎಸ್.ಸಿ ಕೊಠಾರಗಸ್ತಿ, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಎಚ್.ಧನಂಜಯ ಶೆಟ್ಟಿ ಸೇರಿದಂತೆ ಸಮಿತಿಯ ಎಲ್ಲ ಸದಸ್ಯರು, ಅರ್ಚಕ ವರ್ಗ ಮತ್ತು ದೇವಸ್ಥಾನದ ಸಿಬ್ಬಂದಿ ಉಪಸ್ಥಿತರಿದ್ದರು.







