ಪಾಕ್‌ನ 50 ವಿದ್ಯಾರ್ಥಿಗಳನ್ನು ವಾಪಾಸು ಕಳಿಸಿದ ಭಾರತ

ಹೊಸದಿಲ್ಲಿ, ಮೇ 3: ಸರ್ಕಾರೇತರ ಸಂಸ್ಥೆ(ಎನ್‌ಜಿಒ)ಯೊಂದರ ಆಹ್ವಾನದ ಮೇರೆಗೆ ಭಾರತಕ್ಕೆ ಭೇಟಿ ನೀಡಿರುವ ಪಾಕಿಸ್ತಾನದ 50ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಭಾರತ ಸರಕಾರ ವಾಪಾಸು ಕಳಿಸಿದೆ. ಯೋಧರ ಶಿರಚ್ಚೇದದ ಘಟನೆಯ ಬಳಿಕ ಇರುವ ಪರಿಸ್ಥಿತಿ ಈ ಪ್ರವಾಸಕ್ಕೆ ತಕ್ಕುದಾಗಿಲ್ಲ ಎಂದು ಸರಕಾರ ಸ್ಪಷ್ಟಪಡಿಸಿದೆ.
‘ರೂಟ್ಸ್ 2 ರೂಟ್ಸ್’ ಎಂಬ ದಿಲ್ಲಿ ಮೂಲದ ಎನ್‌ಜಿಒ ಸಂಸ್ಥೆ ‘ಬದಲಾವಣೆಗಾಗಿ ವಿನಿಮಯ’ ಎಂಬ ಕಾರ್ಯಕ್ರಮದಡಿ ಪಾಕಿಸ್ತಾನದ 50ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಭಾರತದ ಪ್ರವಾಸಕ್ಕೆ ಆಹ್ವಾನಿಸಿತ್ತು. ಮೇ 1ರಂದು ಇವರು ಭಾರತಕ್ಕೆ ಆಗಮಿಸಿದ್ದರು.
ಆಗ್ರಾಕ್ಕೆ ಭೇಟಿ ನೀಡಬೇಕಿದ್ದ ಈ ತಂಡ ಬಳಿಕ ಗುರುವಾರ ದಿಲ್ಲಿಯಲ್ಲಿರುವ ಪಾಕ್ ರಾಯಭಾರ ಕಚೇರಿಯಲ್ಲಿ ತಮ್ಮ ಅನುಭವಗಳನ್ನು ಭಾರತೀಯ ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳುವ ಕಾರ್ಯಕ್ರಮವಿತ್ತು.
ಆದರೆ ಪಾಕ್ ಸೈನಿಕರಿಂದ ಭಾರತೀಯ ಯೋಧರ ಶಿರಚ್ಛೇದ ಪ್ರಕರಣದ ಬಳಿಕ ಈಗಿನ ಪರಿಸ್ಥಿತಿ ಈ ಪ್ರವಾಸಕ್ಕೆ ಯೋಗ್ಯವಾಗಿಲ್ಲ ಎಂದು ಎನ್‌ಜಿಒ ಸಂಸ್ಥೆಗೆ ತಿಳಿಸಿರುವುದಾಗಿ ವಿದೇಶ ವ್ಯವಹಾರ ಇಲಾಖೆಯ ವಕ್ತಾರ ಗೋಪಾಲ್ ಬಾಗ್ಲೆ ಹೇಳಿದರು.







