ಕೌಟುಂಬಿಕ ಕಲಹ: ಇಂಜೆಕ್ಷನ್, ಮಾತ್ರೆ ನೀಡಿ ಪತಿಯನ್ನೇ ಕೊಂದ ಪತ್ನಿ

ಹಾಸನ, ಮೇ 3: ಕೌಟುಂಬಿಕ ಮನಸ್ತಾಪದಿಂದ ಮಹಿಳೆಯೊಬ್ಬಳು ತನ್ನ ಪತಿಗೆ ಮಾತ್ರೆ ಹಾಗೂ ಇಂಜೆಕ್ಷನ್ ನೀಡಿ ಕೊಲೆಗೈದ ಘಟನೆ ತಾಲೂಕಿನ ಕಿತ್ತನಕೆರೆ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಕಿತ್ತನಕೆರೆ ಗ್ರಾಮದ ವಿಶ್ವನಾಥ್ (28) ತನ್ನ ಸೋದರತ್ತೆ ಮಗಳು ಆಶಾ (24) ಎಂಬಾಕೆಯನ್ನು ವಿವಾಹವಾಗಿದ್ದರು. ಮದುವೆಯಾದ ನಂತರ ಬೇರೆ ಮನೆ ಮಾಡಲು ಈಕೆ ಪತಿ ವಿಶ್ವನಾಥ್ ಅವರನ್ನು ಒತ್ತಾಯಿಸುತ್ತಿದ್ದಳು. ಇದರಿಂದಾಗಿ ಇವರಿಬ್ಬರ ನಡುವೆ ಮನಸ್ತಾಪ ಉಂಟಾಗುತ್ತಿತ್ತು. ಸೋಮವಾರ ಸ್ನೇಹಿತೆಯ ಮಗನ ನಾಮಕರಣ ಇದೆ ಎಂದು ಪತಿ ವಿಶ್ವನಾಥನನ್ನು ಹಾಸನಕ್ಕೆ ಕರೆದೊಯ್ದಿದ್ದ ಆಶಾ ತಾನು ಕೆಲಸ ಮಾಡುತ್ತಿದ್ದ ಮೆಡಿಕಲ್ ಶಾಪ್ ನಿಂದ ಕೆಲ ಮಾತ್ರೆಗಳು ಮತ್ತು ಇಂಜೆಕ್ಷನ್ ಪಡೆದಿದ್ದಾಳೆ. ನಂತರ ಪತಿಯನ್ನು ನಗರದ ಮಹಾರಾಜ ಪಾರ್ಕಿಗೆ ಕರೆತಂದಿದ್ದಳು. ಈ ಸಂದರ್ಭ ಮಾತ್ರೆ ಸೇವಿಸುವಂತೆ ಆಕೆ ವಿಶ್ವನಾಥ್ ನನ್ನು ಒತ್ತಾಯಿಸಿದ್ದು, ಒತ್ತಾಯಕ್ಕೆ ಮಣಿದ ಪತಿ ಮಾತ್ರೆ ಸೇವಿಸಿದ್ದಾರೆ. ನಂತರ ಅಸ್ವಸ್ಥರಾಗಿದ್ದ ವಿಶ್ವನಾಥ್ ಗೆ ಇಂಜೆಕ್ಷನ್ ಚುಚ್ಚಿ ಅಲ್ಲಿಂದ ಪರಾರಿಯಾಗಿದ್ದಳು.
ಅಲ್ಲಿಂದ ತನ್ನ ಅತ್ತೆಯ ಮನೆಗೆ ಹೋಗಿ ಪತಿ ಇನ್ನು ಬಂದಿಲ್ಲ ಎಂದಿದ್ದಾಳೆ. ನಡೆಯಲು ಶಕ್ತಿ ಇರದಿದ್ದರೂ ಪಾರ್ಕಿನಲ್ಲಿದ್ದ ವಿಶ್ವನಾಥ್ ಹೇಗೋ ರಾತ್ರಿಯ ವೇಳೆಗೆ ಮನೆ ಸೇರಿದ್ದಾರೆ. ಈ ವಿಚಾರವನ್ನು ತನ್ನ ಸಹೋದರನಿಗೆ ತಿಳಿಸಿದ್ದು, ತಕ್ಷಣ ನಗರದ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕಳುಹಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ವಿಶ್ವನಾಥ್ ಕೊನೆಯುಸಿರೆಳೆದಿದ್ದಾರೆ.
ಈ ವಿಚಾರವಾಗಿ ವಿಶ್ವನಾಥ್ ಪೋಷಕರು ನಗರ ಪೊಲೀಸ್ ಠಾಣೆಗೆ ದೂರು ದಾಖಲಿಸಿದರು. ಕೆಲ ಸಮಯದಲ್ಲೆ ಆಶಾಳನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.







