ಅಫ್ಘಾನ್: ಅಮೆರಿಕ ಸೇನಾ ವಾಹನಗಳ ಮೇಲೆ ದಾಳಿ
8 ನಾಗರಿಕರ ಸಾವು, ಅಮೆರಿಕನ್ ಸೈನಿಕರಿಗೆ ಗಾಯ

ಕಾಬೂಲ್, ಮೇ 3: ಕಾಬೂಲ್‌ನಲ್ಲಿ ಅಮೆರಿಕದ ಸೇನಾ ವಾಹನಗಳ ಮೇಲೆ ಆತ್ಮಹತ್ಯಾ ಬಾಂಬರ್ ಓರ್ವ ದಾಳಿ ನಡೆಸಿದ್ದು, ಕನಿಷ್ಠ 8 ಅಫ್ಘಾನ್ ನಾಗರಿಕರು ಮೃತಪಟ್ಟಿದ್ದಾರೆ ಹಾಗೂ ಮೂವರು ಅಮೆರಿಕನ್ ಸೈನಿಕರು ಗಾಯಗೊಂಡಿದ್ದಾರೆ.
ದಾಳಿಯ ಹೊಣೆಯನ್ನು ಐಸಿಸ್ ಗುಂಪು ಹೊತ್ತುಕೊಂಡಿದೆ.
ಅಮೆರಿಕ ರಾಯಭಾರ ಕಚೇರಿಯ ಸಮೀಪ ಬೆಳಗ್ಗಿನ ನಿಬಿಡ ಅವಧಿಯಲ್ಲಿ ನಡೆದ ದಾಳಿಯಲ್ಲಿ 25 ಅಫ್ಘಾನ್ ನಾಗರಿಕರೂ ಗಾಯಗೊಂಡಿದ್ದಾರೆ ಎಂದು ಅಫ್ಘಾನ್ ಆಂತರಿಕ ಸಚಿವಾಲಯದ ವಕ್ತಾರರೊಬ್ಬರು ತಿಳಿಸಿದರು. ಸ್ಫೋಟದಲ್ಲಿ ಹಲವಾರು ನಾಗರಿಕ ವಾಹನಗಳೂ ಹಾನಿಗೀಡಾದವು.
ಅಫ್ಘಾನಿಸ್ತಾನದಲ್ಲಿ ಬಲ ವೃದ್ಧಿಸಿಕೊಂಡಿರುವ ಐಸಿಸ್ ಈಗ ಅಲ್ಲಿನ ಅಮೆರಿಕ ಬೆಂಬಲಿತ ಸರಕಾರ ಮತ್ತು ಬೃಹತ್ತಾಗಿ ಬೆಳೆದಿರುವ ತಾಲಿಬಾನಿಗಳ ವಿರುದ್ಧವೂ ಹೋರಾಡುತ್ತಿದೆ.
ಅಫ್ಘಾನಿಸ್ತಾನದಲ್ಲಿರುವ ಅಮೆರಿಕ ಮತ್ತು ನ್ಯಾಟೊ ಪಡೆಗಳು ತಮ್ಮ ಯುದ್ಧ ಕಾರ್ಯವನ್ನು 2014ರ ಕೊನೆಯ ವೇಳೆಗೆ ನಿಲ್ಲಿಸಿವೆ ಹಾಗೂ ತಮ್ಮ ಪಾತ್ರವನ್ನು ಬೆಂಬಲ ಮತ್ತು ಭಯೋತ್ಪಾದನೆ ನಿಗ್ರಹಕ್ಕೆ ಸೀಮಿತಗೊಳಿಸಿಕೊಂಡಿವೆ. ಅಂದಿನಿಂದ ಐಸಿಸ್ ಮತ್ತು ತಾಲಿಬಾನಿಗಳನ್ನು ಎದುರಿಸುವಲ್ಲಿ ಅಫ್ಘಾನ್ ಪಡೆಗಳು ಪರದಾಡುತ್ತಿವೆ.
ಈಗ ಅಫ್ಘಾನಿಸ್ತಾನದಲ್ಲಿ 8,000ಕ್ಕಿಂತ ಅಧಿಕ ಸೈನಿಕರಿದ್ದಾರೆ.







