ಬೈಕ್‌ಗೆ ಕಾರು ಢಿಕ್ಕಿ: ಓರ್ವ ಮೃತ್ಯು

ಕಾರ್ಕಳ, ಮೇ 3: ಅತೀ ವೇಗದಿಂದ ಬಂದ ಸ್ವಿಪ್ಟ್ ಕಾರೊಂದು ನಿಯಂತ್ರಣ ತಪ್ಪಿ ಬೈಕೊಂದಕ್ಕೆ ಹಿಂಬದಿಯಿಂದ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದ ಘಟನೆ ಬುಧವಾರ ನಿಟ್ಟೆ ಬಳಿ ನಡೆದಿದೆ.
ಮಧ್ಯಾಹ್ನ ಊಟ ಮುಗಿಸಿ ಕೆಲಸದ ನಿಮಿತ್ತ ನಿಟ್ಟೆಯಿಂದ ಕಾರ್ಕಳದತ್ತ ಹರೀಶ್ ಆಚಾರ್ಯ ಎಂಬವರು ಬೈಕ್‌ನಲ್ಲಿ ಬರುತ್ತಿದ್ದ ವೇಳೆ ದೂಪದಕಟ್ಟೆ ಸಮೀಪ ಹಿಂಬದಿಯಿಂದ ಅತೀ ವೇಗದಿಂದ ಬಂದ ಮಾರುತಿ ಸ್ವಿಫ್ಟ್ ಕಾರು ಢಿಕ್ಕಿ ಹೊಡೆದಿದೆ. ಪರಿಣಾಮ ಹರೀಶ್ ಆಚಾರ್ಯ ರಸ್ತೆಯ ಬದಿಯ ಮೋರಿಗೆ ಎಸೆಯಲ್ಪಟ್ಟು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.
ಘಟನೆ ನಡೆದ ತಕ್ಷಣ ಸ್ಥಳೀಯರು ಜಮಾಯಿಸಿದ್ದು, ಕಾರಿನಿಂದ ಜಿಗಿದು ಓರ್ವ ಬಾಲಕ ಪರಾರಿಯಾಗಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಮುಂಬೈ ಮೂಲದ 9 ವರ್ಷದ ಬಾಲಕ ಈ ಕಾರು ಚಲಾಯಿಸುತ್ತಿದ್ದ ಎಂದು ಸ್ಥಳಿಯರು ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲದೆ ಈ ಘಟನೆಗೆ ಕಾರಣವಾದ ಬಾಲಕನನ್ನು ಘಟನಾ ಸ್ಥಳಕ್ಕೆ ಕರೆಸುವಂತೆ ಸಾರ್ವಜನಿಕರು ಪಟ್ಟು ಹಿಡಿದಿದ್ದರು. ನಂತರ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕಾಗಮಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ ಬಳಿಕ ಸಾರ್ವಜನಿಕರು ಸ್ಥಳದಿಂದ ತೆರಳಿದ್ದಾರೆ.