ನಿರೀಕ್ಷಿತ ಮಟ್ಟದಲ್ಲಿ ಸೃಷ್ಟಿಯಾಗದ ಉದ್ಯೋಗಗಳು: ಆರ್.ವಿ.ದೇಶಪಾಂಡೆ ಬೇಸರ
ಬೆಂಗಳೂರು, ಮೇ 3: ದೇಶಾದ್ಯಂತ ಕೈಗಾರಿಕೆಗಳ ಬೆಳವಣಿಗೆಗೆ ರಾಜ್ಯ ಮತ್ತು ಕೇಂದ್ರ ಸರಕಾರಗಳು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿವೆ. ಆದರೂ, ಉದ್ಯೋಗಾವಕಾಶಗಳು ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಸೃಷ್ಟಿಯಾಗುತ್ತಿಲ್ಲ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ಬೇಸರ ವ್ಯಕ್ತಪಡಿಸಿದ್ದಾರೆ.
ಬುಧವಾರ ನಗರದ ಕೆ.ಜಿ.ರಸ್ತೆಯಲ್ಲಿರುವ ಎಫ್‌ಕೆಸಿಸಿಐನ ಶತಮಾನೋತ್ಸವ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೇಕ್ ಇನ್ ಇಂಡಿಯಾ, ನವೋದ್ಯಮಗಳಿಗೆ ಉತ್ತೇಜನ ಸೇರಿದಂತೆ ಕೈಗಾರಿಕೆಗಳ ಬೆಳವಣಿಗೆಗೆ ಪೂರಕವಾಗಿ ಯೋಜನೆಗಳು ರೂಪಿಸಿದರೂ ಉದ್ಯೋಗ ಸೃಷ್ಟಿಯಲ್ಲಿ ಮಾತ್ರ ನಾವು ಹಿಂದುಳಿದಿದ್ದೇವೆ ಎಂದರು.
ದೇಶದ ಬಹುತೇಕ ರಾಜ್ಯಗಳಲ್ಲಿ ಉದ್ಯೋಗ ಸೃಷ್ಟಿಯ ಪ್ರಮಾಣ ಶೂನ್ಯವಾಗಿದೆ. ಕರ್ನಾಟಕದಲ್ಲಿ ಶೇ.5ರಷ್ಟು ಉದ್ಯೋಗ ಸೃಷ್ಟಿಯಾಗುತ್ತಿದೆ. ಆದರೆ, ಇದನ್ನೆ ನಾವು ಮಹತ್ವದ ಸಾಧನೆ ಎಂದು ಹೇಳಿಕೊಳ್ಳಲು ಸಾಧ್ಯವಿಲ್ಲ ಎಂದು ದೇಶಪಾಂಡೆ ಹೇಳಿದರು.
ರಕ್ಷಣಾ ಸೇವೆ, ನ್ಯಾನೊ ಟೆಕ್ನಾಲಜಿ ಸೇರಿದಂತೆ ಇನ್ನಿತರ ಕ್ಷೇತ್ರಗಳಲ್ಲಿ ಅವಕಾಶಗಳು ಹೆಚ್ಚುತ್ತಿವೆ. ಇದಕ್ಕೆ ಕೈಗಾರಿಕೋದ್ಯಮಿಗಳ ಸಹಕಾರವು ಅತ್ಯಗತ್ಯ. ಕೈಗಾರಿಕಾ ಸಂಸ್ಥೆಗಳು ಉದಯೋನ್ಮುಖ ಕೈಗಾರಿಕೆಗಳತ್ತ ಹೆಚ್ಚು ಗಮನ ಕೇಂದ್ರೀಕರಿಸಬೇಕು. ಇದರಿಂದ, ತನ್ನ ಅವಕಾಶಗಳನ್ನು ಹೆಚ್ಚಿಸಿಕೊಳ್ಳುತ್ತಿರುವ ನೂತನ ಕ್ಷೇತ್ರಗಳಲ್ಲಿ ಹೆಚ್ಚಿನ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
1995-96ರಲ್ಲಿ ಬೆಂಗಳೂರು ಮಾಹಿತಿ ತಂತ್ರಜ್ಞಾನ(ಐಟಿ)ದ ರಾಜಧಾನಿಯಾಗಲಿದೆ ಎಂದು ಹೇಳಿದ್ದೆ. ಅದೇ ರೀತಿ ಬೆಂಗಳೂರು ಅಭಿವೃದ್ಧಿ ಹೊಂದಿದೆ. ಐಟಿ ವಲಯದಲ್ಲಿ 200 ಕೋಟಿ ರೂ.ಗಳಷ್ಟು ರಫ್ತು ಮಾಡಲು ಹರಸಾಹಸ ಪಡುವ ಕಾಲವೊಂದಿತ್ತು. ಆದರೆ, ಇಂದು ಸಾವಿರಾರು ಕೋಟಿ ರೂ.ಗಳಷ್ಟು ವಹಿವಾಟು ನಡೆಯುತ್ತಿದೆ ಎಂದು ದೇಶಪಾಂಡೆ ಹೇಳಿದರು.
ಈ ಸಂದರ್ಭದಲ್ಲಿ ಎಫ್‌ಕೆಸಿಸಿಐ ಅಧ್ಯಕ್ಷ ಎಂ.ಸಿ.ದಿನೇಶ್, ಹಿರಿಯ ಉಪಾಧ್ಯಕ್ಷ ಕೆ.ರವಿ, ಉಪಾಧ್ಯಕ್ಷ ಸುಧಾಕರ್ ಎಸ್.ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ತಲ್ಲಂ ಆರ್.ದ್ವಾರಕನಾಥ್, ಕಟ್ಟಡ ಸಮಿತಿ ಅಧ್ಯಕ್ಷ ಮಾನಂದಿ ಎನ್.ಸುರೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.