ಡಿಸಿ ಕಚೇರಿ ಮುಂಭಾಗ ಪಾಲೇಮಾಡು ನಿವಾಸಿಗಳಿಂದ ಧರಣಿ

ಮಡಿಕೇರಿ, ಮೇ 3: ಹೊದ್ದೂರು ಗ್ರಾಪಂ ವ್ಯಾಪ್ತಿಯ ಪಾಲೆಮಾಡು ಕಾನ್ಶಿರಾಂ ನಗರದಲ್ಲಿ ಅಂಬೇಡ್ಕರ್ ಜಯಂತಿ ಸಂದರ್ಭ ನಡೆದ ಅಹಿತಕರ ಘಟನೆಗೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಬಹುಜನ ಸಮಾಜ ಪಕ್ಷ ಹಾಗೂ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಪಾಲೆಮಾಡಿನ ನಿವಾಸಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.
ಮೇ 2 ರಂದು ಪಾಲೆಮಾಡಿನಿಂದ ಆರಂಭಿಸಿದ ಪಾದಯಾತ್ರೆ ಇಂದು ಬೆಳಗ್ಗೆ ಮೇಕೇರಿಯಿಂದ ಆರಂಭಗೊಂಡು ಜಿಲ್ಲಾಧಿಕಾರಿ ಕಚೇರಿಯ ಮುಂಭಾಗ ಸತ್ಯಾಗ್ರಹದೊಂದಿಗೆ ಮುಕ್ತಾಯಗೊಂಡಿತು.
ಧರಣಿ ನಿರತರನ್ನು ಉದ್ದೇಶಿಸಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಪ್ರಮುಖರಾದ ಸಿರಿಮನೆ ನಾಗರಾಜು ಮಾತನಾಡಿ, ಪಾಲೆಮಾಡು ನಿವಾಸಿಗಳ ನೈಜ ಬೇಡಿಕೆಗಳನ್ನು ಗೌರವಿಸಿ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಜಿಲ್ಲಾಡಳಿತ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಪಾಲೆಮಾಡಿನ ಸ್ಮಶಾನದ ಜಾಗವನ್ನು ಕ್ರಿಕೆಟ್ ಮೈದಾನ ನಿರ್ಮಾಣಕ್ಕೆ ನೀಡಲು ಕಾಳಜಿ ತೋರಿದ ಜಿಲ್ಲಾಡಳಿತ ಕನಿಷ್ಠ ಅಲ್ಲಿನ ನಿವಾಸಿಗಳಿಗೆ ಹಕ್ಕುಪತ್ರವನ್ನು ನೀಡಲು ಮತ್ತು ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಗಿಲ್ಲವೆಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಬಹುಜನ ಸಮಾಜ ಪಕ್ಷದ ರಾಜ್ಯ ಉಸ್ತುವಾರಿ ಮಾರಸಂದ್ರ ಮುನಿಯಪ್ಪ ಮಾತನಾಡಿ, ಅಂಬೇಡ್ಕರ್ ಜಯಂತಿಯಂದು ವಿವಿಧ ನಾಯಕರ ನಾಮಫಲಕಗಳನ್ನು ಕಿತ್ತು ಹಾಕಿ, ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಮಾಡಿರುವುದು ಖಂಡನೀಯ. ಬಡಜನರ ಸಮಸ್ಯೆಗಳನ್ನು ಅರ್ಥೈಸಿಕೊಂಡು ಪರಿಹಾರ ಸೂಚಿಸಲಾಗದ ಶ್ರೀಮಂತ ಮನೆತನದ ಜಿಲ್ಲಾ ಉಸ್ತುವಾರಿ ಸಚಿವ ಸೀತಾರಾಂ ಅವರಿಗೆ ಬಡವರ ನೋವಿನ ಕೂಗು ಕೇಳಿಸುತ್ತಿಲ್ಲವೆಂದು ಟೀಕಿಸಿದರು.
ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಮಿನ್ ಮೊಹಿಸಿನ್ ಮಾತನಾಡಿ, ಬಡವರ್ಗ, ದಲಿತರು ಮತ್ತು ಅಲ್ಪಸಂಖ್ಯಾತರ ಸಮಸ್ಯೆಗಳು ಬೇರೆ ಬೇರೆಯಲ್ಲ. ನಮ್ಮೆಲ್ಲ ಸಮಸ್ಯೆಗಳ ಬಗೆಹರಿಕೆಗೆ ನಿರಂತರವಾಗಿ ಹೋರಾಟಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ನಿರಂತರ ದೌರ್ಜನ್ಯ ನಡೆಸುವ ಮೂಲಕ ಬಡವರ ತಾಳ್ಮೆಯನ್ನು ಪರೀಕ್ಷಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪಾದಯಾತ್ರೆ ಮತ್ತು ಧರಣಿಯಲ್ಲಿ ಪಾಲೆಮಾಡಿನ ನಿವಾಸಿ ಹಾಗೂ ಬಿಎಸ್‌ಪಿಯ ಕೆ. ಮೊಣ್ಣಪ್ಪ, ಬಿಎಸ್‌ಪಿ ರಾಜ್ಯಾಧ್ಯಕ್ಷ ಮಹೇಶ್, ಜಿಲ್ಲಾ ಅಧ್ಯಕ್ಷ ಪ್ರೇಂ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಕುಂಞಿ, ಮೋಹನ್ ಮೌರ್ಯ, ಎಸ್‌ಡಿಪಿಐನ ಮನ್ಸೂರ್, ಅಬ್ದುಲ್ ಅಡ್ಕಾರ್, ಕೆ.ಜಿ. ಪೀಟರ್, ದಸಂಸದ ಜಯಪ್ಪ ಹಾನಗಲ್ ಸೇರಿದಂತೆ ಹಲವು ಪ್ರಮುಖರು ಹಾಜರಿದ್ದು ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಸಿದರು.







