ಸೆಪ್ಟಂಬರ್‌ನಲ್ಲಿ ಕೋಲ್ಕತಾಕ್ಕೆ ಭೇಟಿ ನೀಡಲಿರುವ ಮರಡೋನಾ

ಕೋಲ್ಕತಾ, ಮೇ 3: ಅರ್ಜೆಂಟೀನದ ಲೆಜಂಡ್ ಡಿಯಾಗೊ ಮರಡೋನಾ ಸೆಪ್ಟಂಬರ್‌ನಲ್ಲಿ ಕೋಲ್ಕತಾಕ್ಕೆ ಭೇಟಿ ನೀಡಲಿದ್ದು, ಭಾರತದ ಮಾಜಿ ನಾಯಕ ಸೌರವ್ ಗಂಗುಲಿ ನೇತೃತ್ವದ ತಂಡದ ಸೆಲೆಬ್ರಿಟಿ ತಂಡದ ವಿರುದ್ಧ ಚಾರಿಟಿ ಫುಟ್ಬಾಲ್ ಪಂದ್ಯವನ್ನು ಆಡಲಿದ್ದಾರೆ.
ಫಿಫಾ ಅಂಡರ್-17 ವಿಶ್ವಕಪ್ ಫೈನಲ್ ನಡೆಯಲು ಒಂದು ತಿಂಗಳು ಬಾಕಿ ಇರುವಾಗ ಮರಡೋನಾ ಕೋಲ್ಕತಾ ನಗರಕ್ಕೆ ಎರಡು ದಿನಗಳ ಭೇಟಿ ನೀಡಲಿದ್ದು,ನಗರದಲ್ಲಿ ಫುಟ್ಬಾಲ್ ಕ್ರೇಜ್‌ನ್ನು ಹೆಚ್ಚಿಸಲಿದ್ದಾರೆ.
1986 ವಿಶ್ವಕಪ್ ವಿಜೇತ ಆಟಗಾರನಾಗಿರುವ ಮರಡೋನಾ ಕೋಲ್ಕತಾಕ್ಕೆ ಎರಡನೆ ಬಾರಿ ಭೇಟಿ ನೀಡುತ್ತಿದ್ದಾರೆ. 2008ರ ಡಿಸೆಂಬರ್‌ನಲ್ಲಿ ಮೊದಲ ಬಾರಿ ಭೇಟಿ ನೀಡಿದ ಸಂದರ್ಭದಲ್ಲಿ ಸಾವಿರಾರು ಫುಟ್ಬಾಲ್ ಅಭಿಮಾನಿಗಳು ಮಧ್ಯರಾತ್ರಿ ಏರ್‌ಪೋರ್ಟ್‌ಗೆ ಧಾವಿಸಿ ಮರಡೋನಾರನ್ನು ಆತ್ಮೀಯವಾಗಿ ಸ್ವಾಗತಿಸಿದ್ದರು.
‘‘ಕೋಲ್ಕತಾ ತುಂಬಾ ವಿಶೇಷವಾದ ಸ್ಥಳ. ಮತ್ತೊಮ್ಮೆ ಅಲ್ಲಿಗೆ ಭೇಟಿ ನೀಡುತ್ತಿರುವುದು ನನಗೆ ಲಭಿಸಿದ ಗೌರವ. ಸುಮಾರು 10 ವರ್ಷಗಳ ಹಿಂದೆ ಕೋಲ್ಕತಾ ಭೇಟಿ ನೀಡಿದ ಸವಿ ನೆನಪು ನನಗೀಗಲೂ ಇದೆ. ಅಲ್ಲಿನ ಅಭಿಮಾನಿಗಳು ಅದ್ಭುತ. ಭಾರತದಲ್ಲಿ ಫುಟ್ಬಾಲ್‌ನ ಅಸಂಖ್ಯಾತ ಅಭಿಮಾನಿಗಳಿದ್ದಾರೆ. ಹೊಸ ಅಭಿಮಾನಿಗಳನ್ನು ಭೇಟಿಯಾಗಲು ಎದುರು ನೋಡುತ್ತಿರುವೆ’’ ಎಂದು 53ರ ಪ್ರಾಯದ ಮರಡೋನಾ ಟೆಲಿ ಕಾನ್ಫರೆನ್ಸ್ ಮೂಲಕ ತಿಳಿಸಿದರು.
ಕೋಲ್ಕತಾಕ್ಕೆ ಎರಡು ದಿನಗಳ ಭೇಟಿ ನೀಡಲಿರುವ ಮರಡೋನಾ ಸೆ.19 ರಂದು ಗಂಗುಲಿ ತಂಡದ ವಿರುದ್ಧ ಚಾರಿಟಿ ಪಂದ್ಯವನ್ನಾಡಲಿದ್ದಾರೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮರಡೋನಾಗೆ ಜೀವಮಾನ ಸಾಧನಾ ಪ್ರಶಸ್ತಿ ನೀಡಿ ಗೌರವಿಸುವ ಕಾರ್ಯಕ್ರಮ ನಿಗದಿಯಾಗಿದೆ.







