ಅಕ್ರಮ ಮರಳುದಂಧೆಗೆ ಪೊಲೀಸರ ಕುಮ್ಮಕ್ಕು ಆರೋಪ: ಪಾಲಗ್ರಹಾರ ಗ್ರಾಮಸ್ಥರಿಂದ ಪ್ರತಿಭಟನೆ

ನಾಗಮಂಗಲ, ಮೇ 3: ತಾಲೂಕಿನ ಪಾಲಗ್ರಹಾರ ಕೆರೆಯಲ್ಲಿ ನಡೆಯುತ್ತಿರುವ ಅಕ್ರಮ ಮರಳು ದಂಧೆಗೆ ಪೊಲೀಸರೇ ಕುಮ್ಮಕ್ಕು ನೀಡುತ್ತಿದ್ದಾರೆ ಮತ್ತು ಮಹಿಳೆಯೊಬ್ಬರ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಪಾಲಗ್ರಹಾರ ಗ್ರಾಮಸ್ಥರು ಬುಧವಾರ ಪಟ್ಟಣದ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕೆರೆಯಲ್ಲಿ ಅಕ್ರಮ ಮರಳು ದಂಧೆಗೆ ಪೊಲೀಸರು ಕುಮ್ಮಕ್ಕು ನೀಡುತ್ತಿದ್ದಾರೆ. ಕುರಿ, ದನ ಮೇಯಿಸುವವರು ನೆರಳಿಗಾಗಿ ಹಾಕಿಕೊಂಡಿದ್ದ ಗುಡಿಸಲಿಗೆ ಬೆಂಕಿಹಚ್ಚಿ ನಾಶಪಡಿಸಿದ ಕ್ರಮವನ್ನು ಪ್ರಶ್ನಿಸಿದ ರೈತ ಮಹಿಳೆ ಲಕ್ಷ್ಮಮ್ಮಳಿಗೆ ಠಾಣೆಯ ಜೀಪ್ ಚಾಲಕ ರವಿ ಹಾಗೂ ರೈಟರ್ ರಮೇಶ್ ಅವಾಚ್ಯವಾಗಿ ನಿಂದಿಸಿ ದೌರ್ಜನ್ಯ ನಡೆಸಿದ್ದಾರೆ ಎಂದು ಪ್ರತಿಭಟನಕಾರರು ಆರೋಪಿಸಿದರು.
ಪಟ್ಟಣ ಠಾಣೆ ಜೀಪ್ ಡ್ರೈವರ್ ರವಿ ಮತ್ತು ರೈಟರ್ ರಮೇಶ್ ಪಾಲಗ್ರಹಾರ ಕೆರೆಯ ಮರಳು ಅಡ್ಡೆಗೆ ಬಂದಿದ್ದಾಗ ರೈತರು ಕೆರೆಯಲ್ಲಿ ನೆರಳಿನ ಆಶ್ರಯಕ್ಕೆ ಹಾಕಲಾಗಿದ್ದ ಶೆಡ್ಡಿಗೆ ಬೆಂಕಿ ಹಚ್ಚಿದ್ದರು. ಅಲ್ಲಿಯೇ ಕುರಿ ಮೇಯಿಸುತ್ತಿದ್ದ ಲಕ್ಷ್ಮಮ್ಮ ಎಂಬವರು ಇದನ್ನು ಪ್ರಶ್ನಿಸಿದ್ದಕ್ಕೆ ದೌರ್ಜನ್ಯ ನಡೆಸಿದ್ದಾರೆ. ಮಹಿಳೆಯ ನೆರವಿಗೆ ಬಂದ ಗ್ರಾಮದ ರಾಮಚಂದ್ರ ಮತ್ತು ಸೋಮ ಎಂಬುವರ ಮೇಲೂ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿದರು.
ನಿತ್ಯ 20ಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳಲ್ಲಿ ಹಗಲು ರಾತ್ರಿ ಎನ್ನದೆ ಪಾಲಗ್ರಹಾರ ಕೆರೆಯಿಂದ ಅಕ್ರಮವಾಗಿ ಮರಳು ತೆಗೆಯುತ್ತಿದ್ದು, ಇದರಿಂದಾಗಿ ಕೆರೆಯಲ್ಲಿ ನೀರಿಲ್ಲದಂತಾಗಿದೆ. ಈ ಬಗ್ಗೆ ದೂರು ನೀಡಿದರೂ ಪೊಲೀಸರು ಕ್ರಮ ವಹಿಸಿಲ್ಲ. ಲಂಚ ಪಡೆದು ಮರಳು ದಂಧೆಗೆ ಸಹಕರಿಸುತ್ತಿದ್ದಾರೆ ಎಂದು ಪ್ರತಿಭಟನನಿರತರು ದೂರಿದರು.
ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಭರವಸೆ
ಪ್ರತಿಟಭನಾಕಾರರಿಂದ ಮನವಿ ಸ್ವೀಕರಿಸಿದ ತಹಸೀಲ್ದಾರ್ ಶಿವಣ್ಣ ಮತ್ತು ಸಿಪಿಐ ಹರೀಶ್ ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮೇಲಾಧಿಕಾರಿಗಳಿಗೆ ತಿಳಿಸಲಾಗುವುದು. ಮರಳು ದಂಧೆ ತಡೆಗೆ ಸಾರ್ವಜನಿಕರೂ ಸಹಕರಿಸಬೇಕು ಎಂದು ಹೇಳಿದರು.
ಪಟೇಲ್ ನಾರಾಯಣ, ಗ್ರಾಪಂ ಸದಸ್ಯ ರಮೇಶ್, ದೌರ್ಜನ್ಯಕ್ಕೊಳಗಾದ ಲಕ್ಷ್ಮಮ್ಮ, ರಾಮಚಂದ್ರ, ಸೋಮ, ಮುಖಂಡರಾದ ಆನಂದ, ಪುಟ್ಟರಾಜು, ಜ್ಯೋತಿ, ಪದ್ಮ, ವೆಂಕಟಲಕ್ಷ್ಮಮ್ಮ, ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.







