ಶಿವ ಥಾಪ, ಸುಮಿತ್, ಅಮಿತ್ ಸೆಮಿಫೈನಲ್‌ಗೆ
ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್

ತಾಷ್ಕೆಂಟ್, ಮೇ 3: ನಾಲ್ಕನೆ ಶ್ರೇಯಾಂಕದ ಶಿವ ಥಾಪ(60 ಕೆಜಿ) ಸಹಿತ ಮೂವರು ಭಾರತದ ಬಾಕ್ಸರ್‌ಗಳು ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಸೆಮಿ ಫೈನಲ್‌ಗೆ ತೇರ್ಗಡೆಯಾಗಿದ್ದಾರೆ. ಈ ಮೂಲಕ ಪದಕವನ್ನು ದೃಢಪಡಿಸಿದ್ದಾರೆ. ಮಾತ್ರವಲ್ಲ ವಿಶ್ವ ಚಾಂಪಿಯನ್‌ಶಿಪ್‌ಗೂ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.
ಶಿವ ಥಾಪರಲ್ಲದೆ ಸುಮಿತ್ ಸಾಂಗ್ವಾನ್(91 ಕೆಜಿ) ಹಾಗೂ ಅಮಿತ್ ಫಾಂಗಲ್(49 ಕೆಜಿ) ಸೆಮಿಫೈನಲ್‌ಗೆ ತೇರ್ಗಡೆಯಾಗಿ ಪದಕ ದೃಢಪಡಿಸಿದ್ದಲ್ಲದೆ ವಿಶ್ವ ಚಾಂಪಿಯನ್‌ಶಿಪ್‌ಗೆ ತಲುಪಿದ್ದಾರೆ.
ಬುಧವಾರ ನಡೆದ ಸ್ಪರ್ಧೆಯಲ್ಲಿ ಚೀನಾದ 3ನೆ ಶ್ರೇಯಾಂಕದ ಫೆಂಗ್‌ಕೈ ಯೂರನ್ನು 4-1 ರಿಂದ ಮಣಿಸಿದ ಸುಮಿತ್ ಭಾರತಕ್ಕೆ ಮೊದಲ ಗೆಲುವು ತಂದುಕೊಟ್ಟರು. ಸುಮಿತ್ ಶುಕ್ರವಾರ ನಡೆಯಲಿರುವ ಸೆಮಿಫೈನಲ್‌ನಲ್ಲಿ ತಜಕಿಸ್ತಾನದ ಜಖೊನ್ ಕೂರ್ಬಾನೊವ್‌ರನ್ನು ಎದುರಿಸಲಿದ್ದಾರೆ.
ಮಧ್ಯಾಹ್ನ ನಡೆದ ಪಂದ್ಯದಲ್ಲಿ ಅಮಿತ್ ಫಾಂಗಲ್(49 ಕೆಜಿ) ಇಂಡೋನೇಷ್ಯದ ಕಾರ್ನೆಲಿಸ್ ಕ್ವಾಂಗು ಅವರನ್ನು 4-1ರಿಂದ ಸೋಲಿಸಿ ಭಾರತಕ್ಕೆ ಮತ್ತೊಂದು ಗೆಲುವು ತಂದರು. ಅಮಿತ್ ಸೆಮಿ ಫೈನಲ್‌ನಲ್ಲಿ ಕಠಿಣ ಸವಾಲು ಎದುರಿಸಲಿದ್ದು, ಉಜ್ಬೇಕಿಸ್ತಾನದ ಒಲಿಂಪಿಯನ್ ಹಸನ್‌ಬಾಯ್ ಡಸ್ಮಟೊವ್‌ರನ್ನು ಎದುರಿಸಲಿದ್ದಾರೆ.
ಕ್ವಾರ್ಟರ್ ಫೈನಲ್‌ನಲ್ಲಿ ಚೈನೀಸ್ ತೈಪೆಯ ಚು-ಎನ್ ಲೈರನ್ನು ಮಣಿಸಿದ ಶಿವ ಥಾಪ ಸತತ 3ನೆ ಬಾರಿ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಪದಕವನ್ನು ದೃಢಪಡಿಸಿದ್ದಾರೆ. 2013ರಲ್ಲಿ ಚಿನ್ನ ಹಾಗೂ 2015ರಲ್ಲಿ ಕಂಚಿನ ಪದಕವನ್ನು ಜಯಿಸಿದ್ದ ಅಸ್ಸಾಂನ ಬಾಕ್ಸರ್ ಶಿವ ಶುಕ್ರವಾರ ನಡೆಯಲಿರುವ ಸೆಮಿ ಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ಚಿನ್‌ರೊರಿಗ್ ಬಾತರ್‌ಸಕ್‌ರನ್ನು ಎದುರಿಸಲಿದ್ದಾರೆ.
ಇದೇ ವೇಳೆ, ಗೌರವ್ ಬಿಧುರಿ(56 ಕೆಜಿ) ದ್ವಿತೀಯ ಶ್ರೇಯಾಂಕದ ಚೀನಾದ ಆಟಗಾರ ಜಿಯಾವೀ ಝಾಂಗ್ ವಿರುದ್ಧ 2-3 ಅಂತರದಿಂದ ಸೋತಿದ್ದಾರೆ.







