ವಿಶ್ವ ವಿದ್ಯಾಲಯದ ಅತಿಥಿ ಗೃಹವನ್ನು ಸ್ಫೋಟಿಸುವ ಬೆದರಿಕೆ ಹಾಕಿದ ಮಾಜಿ ಸಚಿವ ಆಝಮ್ ಖಾನ್ !

ಲಕ್ನೋ,ಮೇ 3: ಜೌಹರ್ ವಿಶ್ವ ವಿದ್ಯಾಲಯದ ಅತಿಥಿ ಗೃಹವನ್ನು ಮುಟ್ಟಲು ಯಾರಾದರೂ ಯತ್ನಿಸಿದರೆ ಅದನ್ನು ಸ್ಫೋಟಿಸುವುದಾಗಿ ಸಮಾಜವಾದಿ ಪಕ್ಷದ ನಾಯಕ ಹಾಗೂ ಮಾಜಿ ಸಚಿವ ಆಝಮ್ ಖಾನ್ ಬೆದರಿಕೆಯೊಡ್ಡ್ದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶದ ಸಚಿವ ಬಲದೇವ ಸಿಂಗ್ ಔಲಾಖ್ ಅವರು, ಖಾನ್ ಯಾವ ಶಸ್ತ್ರಾಸ್ತ್ರಗಳನ್ನು ಹೊಂದಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳಲು ತನಿಖೆಯನ್ನು ನಡೆಸಲಾಗುವುದು ಎಂದು ಹೇಳಿದ್ದಾರೆ.
ಔಲಾಖ್ ಅವರು ಖಾನ್ ಒಡೆತನದ ವಿವಿಯ ಆವರಣದಲ್ಲಿರುವ ಅತಿಥಿ ಗೃಹದಲ್ಲಿ ಜನತಾ ದರ್ಬಾರ್ ನಡೆಸುವ ತನ್ನ ನಿರ್ಧಾರವನ್ನು ವ್ಯಕ್ತಪಡಿಸಿದಾಗಿನಿಂದ ಅವರಿಬ್ಬರ ನಡುವೆ ಈ ಹಗ್ಗಜಗ್ಗಾಟ ನಡೆಯುತ್ತಿದೆ.
ಕೆಲವು ತಿಂಗಳ ಹಿಂದೆ ವಿವಿಯ ಕಟ್ಟಡ ನಿರ್ಮಾಣದಲ್ಲಿ ಅಕ್ರಮಗಳ ಆರೋಪಗಳು ಕೇಳಿ ಬಂದಿದ್ದವು. ಅದರ ಕಾರ್ಯನಿರ್ವಹಣೆ, ಆದಾಯ ಮತ್ತು ವೆಚ್ಚ ಕುರಿತು ತನಿಖೆಗೂ ಒತ್ತಾಯಿಸಲಾಗಿತ್ತು.
ಸರಕಾರದ ಹಣಕಾಸನ್ನು ಬಳಸಿ ವಿವಿ ಕಟ್ಟಡವನ್ನು ನಿರ್ಮಿಸಿರುವುದರಿಂದ ಅದರ ಅತಿಥಿ ಗೃಹದಲ್ಲಿ ತಾನು ಜನತಾ ದರ್ಬಾರ್ ನಡೆಸುವುದನ್ನು ತಡೆಯುವ ಹಕ್ಕು ಯಾರಿಗೂ ಇಲ್ಲ ಎಂದು ಔಲಾಖ್ ಹೇಳಿದ್ದರು.
ಮಂಗಳವಾರ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತಿದ್ದ ಖಾನ್, ಅತಿಥಿಗೃಹ ಅಥವಾ ವಿವಿಯ ಯಾವುದೇ ಭಾಗಕ್ಕೆ ಯಾರಾದರೂ ಕೈಯಿಟ್ಟರೆ ಡೈನಮೈಟ್ ಬಳಸಿ ಅತಿಥಿ ಗೃಹವನ್ನು ಉಡಾಯಿಸಲಾಗುವುದು ಎಂದು ಬೆದರಿಕೆಯೊಡ್ಡಿದ್ದರು.
ಖಾನ್ ಬೆದರಿಕೆಗೆ ಪ್ರತಿಕ್ರಿಯಿಸಿದ ಔಲಾಖ್, ಈ ವಿಷಯವನ್ನು ಮುಖ್ಯಮಂತ್ರಿ ಆದಿತ್ಯನಾಥರ ಗಮನಕ್ಕೆ ತರಲಾಗುವುದು ಮತ್ತು ಖಾನ್ ಬಳಿ ಯಾವ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳಿವೆ ಎನ್ನುವುದನ್ನು ಪತ್ತೆ ಹಚ್ಚಲು ತನಿಖೆಯನ್ನು ನಡೆಸಲಾಗುವುದು ಎಂದು ಹೇಳಿದರು.
ಅತಿಥಿ ಗೃಹದ ನಿರ್ಮಾಣ ಮತ್ತು ನಿರ್ವಹಣೆಗೆ ಸರಕಾರವು ಹಣ ಮಂಜೂರು ಮಾಡಿತ್ತು ಮತ್ತು ಯಾರಾದರೂ ಅತಿಥಿ ಗೃಹದ ಆವರಣವನ್ನು ಪ್ರವೇಶಿಸಲು ಯತ್ನಿಸಿದರೆ ಅದನ್ನು ಅತಿಕ್ರಮಣ ಎಂದು ಪರಿಗಣಿಸಲಾಗುವುದು ಎಂದು ಖಾನ್ ಅವರ ಸಾರ್ವಜನಿಕ ಸಂಪರ್ಕಾಧಿಕಾರಿ ಫಸತ್ ಅಲಿ ಖಾನ್ ಶಾನು ತಿಳಿಸಿದರು.







