ಹೊಸ ಆಧಾರ್ ನೋಂದಣಿಗೆ ಹಣ ಪಡೆದರೆ ಸೂಕ್ತ ಕ್ರಮ: ಡಿಸಿ ಎಚ್ಚರಿಕೆ
ಚಿತ್ರದುರ್ಗ: ಆಧಾರ್ ಪ್ರಗತಿ ಪರಿಶೀಲನಾ ಸಭೆ
ಚಿತ್ರದುರ್ಗ, ಮೇ 3: ಅಟಲ್ ಜನಸ್ನೇಹಿ ಕೇಂದ್ರಗಳು ಸೇರಿದಂತೆ ಸಾಮಾನ್ಯ ಸೇವಾ ಕೇಂದ್ರಗಳಲಿ ಆಧಾರ್ ನೋಂದಣಿ ಮಾಡಲಾಗುತ್ತಿದ್ದು, ಇದಕ್ಕಾಗಿ ಯಾವುದೇ ಶುಲ್ಕ ಪಡೆಯುವಂತಿಲ್ಲ ಎಂದು ಅಪರ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ತಿಳಿಸಿದ್ದಾರೆ. ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಜನಸ್ನೇಹಿ ಕೇಂದ್ರ, ಸಾಮಾನ್ಯ ಸೇವಾ ಕೇಂದ್ರ ಹಾಗೂ ಇ-ಆಡಳಿತದ ಕಂಪ್ಯೂಟರ್ ನಿರ್ವಾಹಕರೊಂದಿಗೆ ನಡೆಸಿದ ಆಧಾರ್ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರಕಾರದ ಎಲ್ಲಾ ಸಹಾಯಧನಗಳು ಸೇರಿದಂತೆ ದಾಖಲೆಗಳಿಗಾಗಿ ಆಧಾರ್ ಸಂಖ್ಯೆಯನ್ನು ಬಳಕೆ ಮಾಡಲಾಗುತ್ತಿದೆ. ಹೊಸದಾಗಿ ಆಧಾರ್ ನೋಂದಣಿಗೆ ಪ್ರತಿ ಆಧಾರ್ ಕಾರ್ಡ್‌ಗೆ ಸರಕಾರವೇ 30 ರೂ. ಶುಲ್ಕ ಭರಿಸುತ್ತಿರುವುದರಿಂದ ಸಾರ್ವಜನಿಕರು ಶುಲ್ಕ ನೀಡಬೇಕಾಗಿಲ್ಲ. ಆದರೆ, ಆಧಾರ್ ಕಾರ್ಡ್‌ನಲ್ಲಿ ತಿದ್ದುಪಡಿ ಮಾಡಿಸುವುವರು ಪ್ರತಿ ಕಾರ್ಡ್‌ಗೆ 25 ರೂ. ಶುಲ್ಕ ನೀಡಬೇಕೆಂದು ಜಿಲ್ಲಾಧಿಕಾರಿ ತಿಳಿಸಿದರು.
ಒಂದು ವೇಳೆ ಹಣವನ್ನು ಪಡೆಯುವ ಬಗ್ಗೆ ದೂರುಗಳು ಬಂದಲ್ಲಿ ಅಂತಹ ಸೇವಾ ಕೇಂದ್ರಗಳನ್ನು ರದ್ದುಪಡಿಸಿ, ಪ್ರಕರಣ ದಾಖಲಿಸ ಲಾಗುತ್ತದೆ. ತಪ್ಪಿತಸ್ಥ ಎಂದು ಸಾಬೀತಾದಲ್ಲಿ 10 ಸಾವಿರ ರೂ. ದಂಡ ಹಾಗೂ ಜೈಲು ಶಿಕ್ಷೆ ವಿಧಿಸಲು ಆಧಾರ್ ಕಾಯ್ದೆ 2016ರಡಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಜಿಲ್ಲೆಯಲ್ಲಿ ಹೋಬಳಿಗೊಂದು ಅಟಲ್ ಜನಸ್ನೇಹಿ ಕೇಂದ್ರಗಳಿದ್ದು 25 ಸಾಮಾನ್ಯ ಸೇವಾ ಖಾಸಗಿ ಕೇಂದ್ರಗಳಿವೆ. ಮತ್ತು 20 ಇ-ಆಡಳಿತದ ಮೊಬೈಲ್ ಕಿಟ್‌ಗಳಿವೆ. ಅಟಲ್ ಜನಸ್ನೇಹಿ ಕೇಂದ್ರ ಹಾಗೂ ಇ-ಆಡಳಿತದ ಶಿಬಿರಗಳಲ್ಲಿ ಆಧಾರ್ ನೋಂದಣಿ, ತಿದ್ದುಪಡಿ ಸಂಪೂರ್ಣ ಉಚಿತವಾಗಿರುತ್ತದೆ ಎಂದು ಅವರು ಇದೇ ವೇಳೆ ಮಾಹಿತಿ ನೀಡಿದರು.
ಸಾಮಾನ್ಯ ಸೇವಾ ಕೇಂದ್ರ ಇವು ಖಾಸಗಿ ಕಂಪ್ಯೂಟರ್ ಇಂಟರ್‌ನೆಟ್ ಸೇವಾ ಕೇಂದ್ರಗಳಾಗಿದ್ದು, ಆಯ್ದ ಕೇಂದ್ರಗಳಿಗೆ ಮಾತ್ರ ಸಾಮಾನ್ಯ ಸೇವಾ ಕೇಂದ್ರದ ಅನುಮತಿ ನೀಡಲಾಗಿದೆ. ಇವರು ತಮ್ಮ ಸೇವಾ ಕೇಂದ್ರದ ಮುಂಭಾಗದಲ್ಲಿ ಪ್ರತಿ ಸೇವೆಗೆ ನಿಗದಿ ಮಾಡಿದ ಶುಲ್ಕದ ವಿವರವನ್ನು ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶನ ಮಾಡುವುದು ಕಡ್ಡಾಯವಾಗಿದೆ ಎಂದರು. ಈ ಬಗ್ಗೆ 5 ದಿನಗಳಲ್ಲಿ ಎಲ್ಲಾ ಕೇಂದ್ರಗಳಲ್ಲಿ ಶುಲ್ಕ ವಿವರ ಪ್ರದರ್ಶನ ಮಾಡಬೇಕೆಂದು ಸೂಚಿಸಿದ್ದರೂ, ಯಾರು ಇದನ್ನು ಪಾಲನೆ ಮಾಡುತ್ತಿಲ್ಲ ಎಂದು ನುಡಿದ ಅಂತಹ ಸೇವಾ ಕೇಂದ್ರಗಳನ್ನು ರದ್ದು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸೇವಾ ಕೇಂದ್ರಗಳಲ್ಲಿ ನಿಯಮದಂತೆ ಸೇವೆಯನ್ನು ನೀಡುವ ಮೂಲಕ ವಯೋವೃದ್ಧರಿಗೆ, ಮಹಿಳೆಯರಿಗೆ ಆಧಾರ್ ನೋಂದಣಿಗೆ ಮೊದಲ ಆದ್ಯತೆ ನೀಡಬೇಕೆಂದು ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಆಧಾರ್ ಸಮನ್ವಯಾಧಿಕಾರಿ ರಂಗನಾಥ್, ಡಿಜಿಟಲ್ ಇಂಡಿಯಾ ಸಮನ್ವಯಾಧಿಕಾರಿ ಸಮರ್ಥ್ ಹಾಗೂ ವಿವಿಧ ಸೇವಾ ಕೇಂದ್ರಗಳ ಮುಖ್ಯಸ್ಥರು ಉಪಸ್ಥಿತರಿದ್ದರು.







