ಮಂಜೇಶ್ವರ: ಯುವ ಕಾಂಗ್ರೆಸ್ ನ ವಾಹನ ಪ್ರಚಾರ ಜಾಥಾಕ್ಕೆ ಚಾಲನೆ
.gif)
ಮಂಜೇಶ್ವರ, ಮೇ 3: ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದಿರುವ ಎಡರಂಗ ಸರಕಾರ ಪ್ರಜಾ ವಂಚನೆಯ ಅಧಿಕಾರ ನಡೆಸುತ್ತಿದ್ದು, ಐದು ವರ್ಷಗಳ ಆಡಳಿತ ನಡೆಸದೆ ಮಂತ್ರಿಮಂಡಲ ವಿಸರ್ಜಿಸಿ ಹೊರನಡೆಯುವುದು ಸೂಕ್ತ ಎಂದು ವಿಧಾನಸಭೆಯ ವಿಪಕ್ಷ ನಾಯಕ, ಹಿರಿಯ ಕಾಂಗ್ರೆಸ್ ಮುಖಂಡ ರಮೇಶ ಚೆನ್ನಿತ್ತಲ ಹೇಳಿದರು.
ಕೇಂದ್ರ ಮತ್ತು ರಾಜ್ಯ ಸರಕಾರಗಳ ಕೋಮುವಾದ ಹಾಗೂ ಜನವಿರೋಧಿ ಆಡಳಿತದ ವಿರುದ್ಧ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡೀನ್ ಕುರ್ಯಾಕೋಸ್ ನೇತೃತ್ವದಲ್ಲಿ ಹಮ್ಮಿಕೊಂಡ ಕಾಸರಗೋಡಿನಿಂದ ತಿರುವನಂತಪುರಕ್ಕೆ ನಡೆಸುವ ವಾಹನ ಪ್ರಚಾರ ಜಾಥಾಕ್ಕೆ ಬದಿಯಡ್ಕದಲ್ಲಿ ಅಧಿಕೃತ ಚಾಲನೆ ನೀಡಿ ಧ್ವಜ ಹಸ್ತಾಂತರಿಸಿ ಅವರು ಮಾತನಾಡಿದರು.
ಎಡರಂಗ ಆಂತರಿಕ ಕಲಹದಲ್ಲಿ ವ್ಯಸ್ತವಾಗಿದ್ದು, ಆಡಳಿತ ನೀಡಲು ಮರೆತಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆ ಪಕ್ಷದ ವರಿಷ್ಠರ ನಿರ್ದೇಶನಗಳನ್ನು ಗಾಳಿಗೆ ತೂರಿ ಸ್ವಜನಪಕ್ಷಪಾತ, ಭ್ರಷ್ಟಾಚಾರ ಮತ್ತು ಕೋಮುವಾದ ಬೆಳೆಸುವಲ್ಲಿ ಮಗ್ನರಾಗಿರುವುದು ರಾಜ್ಯದ ಜನಸಾಮಾನ್ಯರ ನಿತ್ಯ ಜೀವನದ ಮೇಲೆ ತೀವ್ರ ಪರಿಣಾಮ ಬೀರಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಕೀಂ ಕುನ್ನಿಲ್ ಅಧ್ಯಕ್ಷತೆ ವಹಿಸಿದ್ದರು. ಮುಖಂಡ, ಮಾಜಿ ಸಚಿವ ಕೆ.ಸುಧಾಕರನ್, ಕೆ.ಸಿ. ಜೋಸೆಫ್, ಎಂ.ವಿ.ಸನಲ್, ಶಾಸಕ ಶಾಫಿ ಪರಂಬಿಲ್, ಬೆನ್ನಿ ಬೆಹನಾನ್, ಮಂಕಡ ರಾಧಾಕೃಷ್ಣನ್, ಜೈಸೆನ್ ಜೋಸೆಪ್, ಯುವ ಕಾಂಗ್ರೆಸ್ ಅಖಿಲ ಭಾರತ ಕಾರ್ಯದರ್ಶಿ ರವೀಂದ್ರದಾಸ್, ವೈಷ್ಣವ್ ಮೊದಲಾದವರು ಮಾತನಾಡಿದರು.
ಸೈಯದ್ ಮವ್ವಲ್ ಸ್ವಾಗತಿಸಿ, ಶ್ರೀಜಿತ್ ಮಡಕ್ಕರ ವಂದಿಸಿದರು.







