ಸರಕಾರಿ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಊಟ ಸವಿದು ಗುಣಮಟ್ಟ ಪರೀಕ್ಷಿಸಿದ ಶಿವಮೊಗ್ಗ ಡಿ.ಸಿ.

ಶಿವಮೊಗ್ಗ, ಮೇ 3: ಸರಕಾರಿ ಕಚೇರಿ, ಆಸ್ಪತ್ರೆಗಳಿಗೆ ದಿಢೀರ್ ಭೇಟಿಯಿತ್ತು ಪರಿಶೀಲನೆ ನಡೆಸುವ ಕಾರ್ಯವನ್ನು ಶಿವಮೊಗ್ಗ ಜಿಲ್ಲಾಧಿಕಾರಿ ಡಾ. ಎಂ. ಲೋಕೇಶ್ ಮುಂದುವರಿಸಿದ್ದಾರೆ. ಬುಧವಾರ ನಗರದ ಸರಕಾರಿ ಮೆಗ್ಗಾನ್ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ, ರೋಗಿಗಳಿಗೆ ನೀಡಲಾಗುವ ಊಟದ ಗುಣಮಟ್ಟದ ಪರೀಕ್ಷೆ ನಡೆಸಿದರು.
ಈ ವೇಳೆ ಅನ್ನ, ಸಾಂಬಾರು ಮತ್ತಿತರ ಆಹಾರ ಪದಾರ್ಥಗಳನ್ನು ಸೇವಿಸಿ ಗುಣಮಟ್ಟ ಹಾಗೂ ರುಚಿಯ ಪರೀಕ್ಷೆಯನ್ನು ಖುದ್ದು ಜಿಲ್ಲಾಧಿಕಾರಿ ನಡೆಸಿದರು. ಪರಿಶೀಲನೆಯ ವೇಳೆ ಬಹುತೇಕ ಎಲ್ಲ ಆಹಾರ ಪದಾರ್ಥಗಳ ಗುಣಮಟ್ಟ ಉತ್ತಮವಾಗಿರುವುದು ಕಂಡುಬಂದಿದೆ. ಹಾಗೆಯೇ ವಿವಿಧ ವಾರ್ಡ್‌ಗಳಿಗೆ ಭೇಟಿಯಿತ್ತು, ಆಸ್ಪತ್ರೆಯಲ್ಲಿ ನೀಡುವ ತಿಂಡಿ-ಊಟದ ಬಗ್ಗೆ ಕೆಲ ರೋಗಿಗಳ ಅಭಿಪ್ರಾಯ ಕೂಡ ಆಲಿಸಿದರು. ಈ ವೇಳೆ ರೋಗಿಗಳು ತಮಗೆ ನೀಡಲಾಗುತ್ತಿರುವ ತಿಂಡಿ-ಊಟ ಗುಣಮಟ್ಟದಿಂದ ಕೂಡಿದ್ದು, ಯಾವುದೇ ವ್ಯತ್ಯಾಸ ಕಂಡುಬರುತ್ತಿಲ್ಲವೆಂದು ಡಿಸಿಯವರಿಗೆ ತಿಳಿಸಿದ್ದಾರೆ.
ದೂರುಗಳು ಬಂದಿದ್ದವು: ಆಸ್ಪತ್ರೆಗೆ ಭೇಟಿಯಿತ್ತ ನಂತರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಡಾ. ಎಂ. ಲೋಕೇಶ್ ಮಾತನಾಡಿ, "ಆಸ್ಪತ್ರೆಯಲ್ಲಿ ನೀಡುತ್ತಿರುವ ಊಟದ ಗುಣಮಟ್ಟ ಉತ್ತಮವಾಗಿಲ್ಲ ಎಂಬ ದೂರು ಸಾರ್ವಜನಿಕ ವಲಯದಿಂದ ಕೇಳಿಬಂದಿತ್ತು. ಈ ಬಗ್ಗೆ ಪರಿಶೀಲನೆ ನಡೆಸುವ ಉದ್ದೇಶದಿಂದ ದಿಢೀರ್ ಆಸ್ಪತ್ರೆಗೆ ಭೇಟಿಯಿತ್ತು ಊಟದ ಗುಣಮಟ್ಟದ ಪರಿಶೀಲನೆ ನಡೆಸಿದ್ದನೆ" ಎಂದರು.





