ತೆರಿಗೆ ಅಧಿಕಾರಿಗಳಿಗೇ ಸಿಬಿಐ ಕುಣಿಕೆ!

ಮುಂಬೈ, ಮೇ 4: ಮುಂಬೈನ ಆದಾಯ ತೆರಿಗೆ ಆಯುಕ್ತ, ಎಸ್ಸಾರ್ ಸಮೂಹದ ಆಡಳಿತ ನಿರ್ದೇಶಕ ಸೇರಿದಂತೆ ಆರು ಮಂದಿಯನ್ನು ಸಿಬಿಐ ಲಂಚ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬಂಧಿಸಿದೆ.
ಆದಾಯ ತೆರಿಗೆ ವ್ಯಾಜ್ಯ ಪರಿಹಾರ ವಿಭಾಗದ ಆಯುಕ್ತ ಬಿ.ಬಿ.ರಾಜೇಂದ್ರರನ್ನು ಬುಧವಾರ ರಾತ್ರಿ ಸಿಬಿಐ ಅಧಿಕಾರಿಗಳು ಬಂಧಿಸಿದರು. ಎಸ್ಸಾರ್ ಉದ್ಯಮ ಸಮೂಹ ಟ್ರಸ್ಟಿಯಾಗಿರುವ ಬಾಲಾಜಿ ಟ್ರಸ್ಟ್‌ನ ಪರವಾಗಿ ಆದೇಶವೊಂದನ್ನು ಹೊರಡಿಸುವಂತೆ, ರಾಜೇಂದ್ರ ಅವರಿಗೆ ಲಂಚ ನೀಡಲಾಗಿತ್ತು ಎಂಬ ಆರೋಪದಲ್ಲಿ ಅವರನ್ನು ಬಂಧಿಸಲಾಗಿದೆ.
ಎಸ್ಸಾರ್ ಸಮೂಹದ ಆಡಳಿತ ನಿರ್ದೇಶಕ ಪ್ರದೀಪ್ ಮಿತ್ತಲ್, ಲೆಕ್ಕಾಧಿಕಾರಿ ವಿಪಿನ್ ಬಾಜಪೇಯಿ, ರಿಯಲ್ ಎಸ್ಟೇಟ್ ಉದ್ಯಮಿ ಸುರೇಶ್ ಕುಮಾರ್ ಜೈನ್, ಸಂಬಂಧಿ ಮನೀಶ್ ಜೈನ್ ಹಾಗೂ ಜಿ.ಕೆ.ಚೋಸ್ಕಿ ಆ್ಯಂಡ್ ಕೋ ಲೆಕ್ಕ ಪರಿಶೋಧನಾ ಸಂಸ್ಥೆಯ ಶ್ರೇಯಸ್ ಪಾರಿಖ್ ಬಂಧಿತರಲ್ಲಿ ಸೇರಿದ್ದಾರೆ. ಪ್ರಸಾದ್ ಹಾಗೂ ಸುರೇಶ್ ಕುಮಾರ್ ಜೈನ್ ಅವರನ್ನು ವಿಶಾಖಪಟ್ಟಣಂನಲ್ಲಿ ಬಂಧಿಸಲಾಗಿದ್ದು, ಉಳಿದ ಆರೋಪಿಗಳನ್ನು ಮುಂಬೈನಲ್ಲಿ ಬಂಧಿಸಲಾಗಿದೆ. ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 7ರಿಂದ 12ರ ಅಡಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಆದಾಯ ತೆರಿಗೆ ಆಯುಕ್ತ (ಮೇಲ್ಮನವಿ- 30ನೆ ವಿಭಾಗ) ಇತ್ತೀಚೆಗೆ ಖಾಸಗಿ ಟ್ರಸ್ಟ್ ಒಂದರ ಪರವಾಗಿ ತೀರ್ಪು ನೀಡಲು 2 ಕೋ.ರೂ. ಲಂಚ ಕೇಳಿದ್ದರು ಎಂಬ ಆರೋಪವಿದೆ. ಈ ಹಣವನ್ನು ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಸಂಬಂಧಿಗೆ ನೀಡುವಂತೆ ಸೂಚಿಸಿದ್ದಾರೆ. ಈ ಹಣವನ್ನು ಆತ ಸಂಗ್ರಹಿಸಿ ವಿಶಾಖಪಟ್ಟಣಂನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರಿಗೆ ವರ್ಗಾಯಿಸಿದ್ದಾರೆ ಎಂಬ ಆರೋಪವಿದೆ ಎಂದು ಸಿಬಿಐ ಪ್ರಕಟಿಸಿದೆ.