ಎಚ್‌ಐವಿ ಪೀಡಿತ ಮಹಿಳೆಯ ಗರ್ಭಪಾತಕ್ಕೆ ಅಸ್ತು

ಹೊಸದಿಲ್ಲಿ, ಮೇ 4: ಅತ್ಯಾಚಾರದಿಂದಾಗಿ ಗರ್ಭ ಧರಿಸಿದ್ದ ಎಚ್‌ಐವಿ ಸಂತ್ರಸ್ತೆಯೊಬ್ಬರಿಗೆ ಗರ್ಭಪಾತ ಮಾಡಿಸಿಕೊಳ್ಳಲು ಸುಪ್ರೀಂಕೋರ್ಟ್ ಅನುಮತಿ ನೀಡಿದೆ. 35 ವರ್ಷದ ಎಚ್‌ಐವಿ ಸಂತ್ರಸ್ತೆಗೆ ಇಲ್ಲಿನ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡುವಂತೆ ಸೂಚಿಸಲಾಗಿದೆ.
ಆರೋಗ್ಯ ಸಂಕೀರ್ಣತೆಯ ಹಿನ್ನೆಲೆಯಲ್ಲಿ ತಮ್ಮ 26 ವಾರಗಳ ಭ್ರೂಣವನ್ನು ತೆಗೆಸಿಕೊಳ್ಳಲು ಅನುಮತಿ ನೀಡುವಂತೆ ಸುಪ್ರೀಂಕೋರ್ಟ್‌ಗೆ ಮೊರೆ ಹೋಗಿದ್ದರು. ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ, ಎ.ಎಂ.ಖನ್ವೀಲ್ಕರ್ ಹಾಗೂ ಎಂ.ಎಂ.ಶಾಂತನಗೌಡರ್ ಅವರನ್ನೊಳಗೊಂಡ ನ್ಯಾಯಪೀಠ ಈ ಮಹತ್ವದ ಆದೇಶ ನೀಡಿದೆ. ಪಾಟ್ನಾದ ಈ ಮಹಿಳೆಗೆ ಎಐಐಎಂಎಸ್‌ನಲ್ಲಿ ಚಿಕಿತ್ಸೆ ನೀಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ನ್ಯಾಯಪೀಠ ಆದೇಶಿಸಿದೆ.
ಅತ್ಯಾಚಾರಕ್ಕೆ ಒಳಗಾದ ಮಹಿಳೆಯನ್ನು ಪಟ್ನಾದ ಪುನರ್ವಸತಿ ಕೇಂದ್ರಕ್ಕೆ ಸೇರಿಸಲಾಗಿತ್ತು. ಆಕೆ ಗರ್ಭಿಣಿಯಾಗಿರುವುದು ತಡವಾಗಿ ಗಮನಕ್ಕೆ ಬಂದಿತ್ತು. ಇದು ಗಮನಕ್ಕೆ ಬಂದ ಬಳಿಕ ಗರ್ಭಪಾತ ಮಾಡಿಸಿಕೊಳ್ಳಲು ಆಕೆ ಬಯಸಿದ್ದರು. ಪಾಟ್ನಾ ಮೂಲದ ಸ್ವಯಂಸೇವಾ ಸಂಸ್ಥೆ ಹಾಗೂ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್‌ನ ಸಂಶೋಧನಾ ವಿದ್ಯಾರ್ಥಿಗಳು ಈಕೆಗೆ ನೆರವಿನ ಹಸ್ತ ಚಾಚಿದರು. ಆಕೆ ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವುದರಿಂದ ಗರ್ಭಪಾತ ಮಾಡಿಸಿಕೊಳ್ಳುವುದು ಸೂಕ್ತ ಎಂಬ ಅಭಿಪ್ರಾಯಕ್ಕೆ ಬಂದರು. ಆದರೆ 20 ವಾರಗಳ ಬಳಿಕ ಗರ್ಭಿಣಿಯರು ಗರ್ಭಪಾತ ಮಾಡಿಸಿಕೊಳ್ಳಲು ಕಾನೂನಿನಲ್ಲಿ ಅವಕಾಶವಿಲ್ಲ. ಈ ಹಿನ್ನೆಲೆಯಲ್ಲಿ ನೆರವಾಗುವಂತೆ ಹೈಕೋರ್ಟ್‌ಗೆ ಮನವಿ ಮಾಡಿಕೊಳ್ಳಲಾಗಿತ್ತು. ಈ ಮನವಿಯನ್ನು ಹೈಕೋರ್ಟ್ ತಳ್ಳಿಹಾಕಿತ್ತು. ಗರ್ಭಪಾತ ಮಾಡಿಸಿಕೊಳ್ಳುವುದರಿಂದ ಆಕೆಯ ಜೀವಕ್ಕೆ ಅಪಾಯವಿದೆ ಎಂದು ಕಾರಣ ನೀಡಿ, ಮನವಿ ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಲಾಗಿತ್ತು.