‘ಸ್ಕಾರ್ಪಿಯೋ’ ಪ್ರೇಮಿ ಆಟೋ ಚಾಲಕನಿಗೆ ಮಹೀಂದ್ರ ಮಾಲಕ ನೀಡಿರುವ ಉಡುಗೊರೆ ಏನು ಗೊತ್ತೇ?

ಮುಂಬೈ, ಮೇ 4: ಖ್ಯಾತ ಆಟೊಮೊಬೈಲ್ ಕಂಪೆನಿ ಮಹೀಂದ್ರಾ ಗ್ರೂಪಿನ ಅಧ್ಯಕ್ಷ ಆನಂದ್ ಮಹೀಂದ್ರ ಇತ್ತೀಚೆಗೆ ಸುನಿಲ್ ಎಂಬ ಕೇರಳದ ಆಟೋರಿಕ್ಷಾ ಚಾಲಕನಿಗೆ ಹೊಚ್ಚ ಹೊಸ ಮಹೀಂದ್ರಾ ಸುಪ್ರೊ ಮಿನಿ ಟ್ರಕ್ ಉಡುಗೊರೆಯಾಗಿ ನೀಡಿದ್ದಾರೆ ಹಾಗೂ ಆತನ ಆಟೋರಿಕ್ಷಾವನ್ನು ತಾವು ಪಡೆದುಕೊಂಡಿದ್ದಾರೆ.. ಅಷ್ಟಕ್ಕೂ ಈ ಉಡುಗೊರೆಯ ಹಿಂದಿನ ಕಥೆ ಸ್ವಾರಸ್ಯಕರ.
ಸುನಿಲ್ ಅವರು ಕಳೆದ ವರ್ಷ ತಮ್ಮ ಆಟೋರಿಕ್ಷಾದ ಹಿಂಭಾಗವನ್ನು ಮಹೀಂದ್ರ ಸ್ಕಾಪಿರ್ಯೋ ವಾಹನದ ಥರ ಕಾಣಲು ಸೂಕ್ತ ಮಾರ್ಪಾಟುಗಳನ್ನು ಮಾಡಿದ್ದರು. ಅವರು ಸ್ಕಾರ್ಪಿಯೋ ವಾಹನವನ್ನು ಇಷ್ಟಪಟ್ಟಿದ್ದೇ ಇದಕ್ಕೆ ಕಾರಣ. ಇದನ್ನು ನೋಡಿದ್ದ ಅನಿಲ್ ಪಣಿಕ್ಕರ್ ಎಂಬ ಟ್ವಿಟ್ಟರಿಗ ಅದರ ಫೋಟೋ ತೆಗೆದು ಮಾರ್ಚ್ 19ರಂದು ಆನಂದ್ ಮಹೀಂದ್ರಾ ಅವರನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿ ಸ್ಕಾರ್ಪಿಯೋ ವಾಹನ ಭಾರತದಲ್ಲಿ ಅದೆಷ್ಟು ಜನಪ್ರಿಯ ಎಂದು ಹೇಳಿದ್ದರು.
ಈ ಮೋಡಿಫೈಡ್ ಆಟೋ ನೋಡಿ ಖುಷಿ ಪಟ್ಟ ಆನಂದ್ ಮಹೀಂದ್ರ, ಪಣಿಕ್ಕರ್ ಅವರಿಗೆ ಉತ್ತರ ಕಳುಹಿಸಿ ಆ ಆಟೋ ಮಾಲಕನನ್ನು ಪತ್ತೆ ಹಚ್ಚಲು ನೆರವು ಯಾಚಿಸಿದರಲ್ಲದೆ ಆತನ ಆಟೋ ತಾವು ಖರೀದಿಸಿ ಆತನಿಗೆ ನಾಲ್ಕು ಚಕ್ರಗಳ ವಾಹನ ನೀಡುವುದಾಗಿ ಹೇಳಿದ್ದರು. ಒಂದು ತಿಂಗಳ ನಂತರ ಆ ಆಟೋ ಚಾಲಕನನ್ನು ಪತ್ತೆ ಹಚ್ಚಿ ನಂತರ ತಮ್ಮ ಮಾತಿನಂತೆ ಆತನ ಆಟೋವನ್ನು ಖರೀದಿಸಿ ಆತನಿಗೆ ಹೊಚ್ಚ ಹೊಸ ವಾಹನವನ್ನು ಉಡುಗೊರೆಯಾಗಿ ನೀಡಿದ್ದಾರೆ, ಈ ಬಗ್ಗೆ ಟ್ವೀಟ್ ಕೂಡ ಮಾಡಿದ್ದಾರೆ.
ಸುನಿಲ್ ಅವರ ಮೋಡಿಫೈಡ್ ಆಟೋವನ್ನು ಮಹೀಂದ್ರಾ ಕಂಪೆನಿ ತನ್ನ ಮಹೀಂದ್ರ ಆ್ಯಂಡ್ ಮಹೀಂದ್ರ ಮ್ಯೂಸಿಯಂನಲ್ಲಿಡಲಿದೆ.