ಕುಂಜತ್ತೂರು: ಸಂಘಪರಿವಾರದ ಕಾರ್ಯಕರ್ತರಿಂದ ಮನೆಗೆ ನುಗ್ಗಿ ದಾಂಧಲೆ
ಮಹಿಳೆಯರ ಸಹಿತ ಮೂವರ ಮೇಲೆ ಹಲ್ಲೆ, ಇಬ್ಬರು ಆಸ್ಪತ್ರೆಗೆ ದಾಖಲು

ಮಂಜೇಶ್ವರ, ಮೇ 4: ಸುಮಾರು 15 ಮಂದಿಯ ತಂಡವೊಂದು ಮನೆಗೆ ನುಗ್ಗಿ ಮಹಿಳೆಯರು ಸೇರಿದಂತೆ ಮೂವರ ಮೇಲೆ ಹಲ್ಲೆ ನಡೆಸಿರುವ ಘಟನೆ ಕುಂಜತ್ತೂರು ಪದವು ಎಂಬಲ್ಲಿ ನಿನ್ನೆ ಮಧ್ಯರಾತ್ರಿ ನಡೆದಿದೆ.
ಕುಂಜತ್ತೂರು ಪದವಿನ ಇಬ್ರಾಹೀಂ ಎಂಬವರ ಮನೆ ಮೇಲೆ ಈ ದಾಳಿ ನಡೆದಿದೆ. ಸಂಘಪರಿವಾರದ ಕಾರ್ಯಕರ್ತರು ಈ ದಾಳಿ ನಡೆಸಿದ್ದಾರೆ ಎಂದು ಇಬ್ರಾಹೀಂ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.
ನಿನ್ನೆ ರಾತ್ರಿ 12:30ರ ಸುಮಾರಿಗೆ 15ರಷ್ಟು ಮಂದಿಯ ತಂಡವೊಂದು ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಇಬ್ರಾಹೀಂ, ಪುತ್ರ ನಿಝಾಝ್ ಹಾಗೂ ಪುತ್ರಿ ಝರೀನಾ ಎಂಬವರ ಮೇಲೆ ಹಲ್ಲೆ ನಡೆಸಿದ್ದರೆನ್ನಲಾಗಿದೆ. ಹಲ್ಲೆಯಿಂದ ಗಾಯಗೊಂಡಿರುವ ನಿಝಾಝ್ ಹಾಗೂ ಝರೀನಾರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಳೆದ ರಾತ್ರಿ ಇಬ್ರಾಹೀಂ ಮನೆಯಲ್ಲಿ ದುರಸ್ತಿ ಕಾಮಗಾರಿ ನಡೆಯುತ್ತಿತ್ತು. ಈ ಸಂದರ್ಭ ವಿದ್ಯುತ್ ವ್ಯತ್ಯಯಗೊಂಡಿತ್ತು. ಇದೇ ಸಂದರ್ಭ ದುಷ್ಕರ್ಮಿಗಳು ಈ ದಾಳಿ ನಡೆಸಿದ್ದರೆನ್ನಲಾಗಿದೆ.
ಕಳೆದ ಚುನಾವಣೆಯೊಂದಕ್ಕೆ ಸಂಬಂಧಿಸಿ ಇಲ್ಲಿನ ಮಸೀದಿ ಬಳಿ ಬಿಜೆಪಿ ಕಾರ್ಯಕರ್ತರು ಸಿಡಿಮದ್ದು ಸಿಡಿಸಿ ವಿಜಯೋತ್ಸವ ಆಚರಿಸಿದ್ದರು. ಈ ಸಂಬಂಧ ಬಿಜೆಪಿ ಕಾರ್ಯಕರ್ತರ ಮೇಲೆ ದೂರು ದಾಖಲಾಗಿತ್ತು. ಇದೇ ದ್ವೇಷದಲ್ಲಿ ಈ ದಾಳಿ ನಡೆದಿದೆ ಎಂದು ದೂರಲಾಗಿದೆ.
ಈ ಬಗ್ಗೆ ಮಂಜೇಶ್ವರ ಠಾಣೆಗೆ ದೂರು ನೀಡಲಾಗಿದೆ.







