ದೇಶದ ಸ್ವಚ್ಛ ನಗರಗಳ ಪಟ್ಟಿ ಬಿಡುಗಡೆ: ಮಧ್ಯಪ್ರದೇಶದ ಇಂದೋರ್ಗೆ ಪ್ರಥಮ ಸ್ಥಾನ
5ನೆ ಸ್ಥಾನಕ್ಕೆ ಜಾರಿದ ಮೈಸೂರು, ಉತ್ತರಪ್ರದೇಶದ ಗೋಂಡಾ ಅತ್ಯಂತ ಕೊಳಕು ನಗರ

ಕೃಪೆ : ಟೈಮ್ಸ್ ಆಫ್ ಇಂಡಿಯಾ
ಹೊಸದಿಲ್ಲಿ, ಮೇ 4: ಕೇಂದ್ರ ಸರಕಾರ ನಡೆಸಿರುವ ಸ್ವಚ್ಛ ಸರ್ವೇಕ್ಷಣೆಯ ಪ್ರಕಾರ ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶದ ಇಂದೋರ್ ಅತ್ಯಂತ ಸ್ವಚ್ಛ ನಗರವಾಗಿದ್ದರೆ, ಉತ್ತರಪ್ರದೇಶದ ಗೋಂಡಾ ಅತ್ಯಂತ ಕೊಳಕು ನಗರವಾಗಿದೆ.
ಮಧ್ಯಪ್ರದೇಶದ ಇನ್ನೊಂದು ನಗರ ಭೋಪಾಲ್ ಸ್ವಚ್ಛ ನಗರಗಳ ಪಟ್ಟಿಯಲ್ಲಿ 2ನೆ ರ್ಯಾಂಕಿನಲ್ಲಿದ್ದರೆ, ಆಂಧ್ರಪ್ರದೇಶದ ವಿಶಾಖಪಟ್ಟಣ, ಗುಜರಾತ್ನ ಸೂರತ್ ಕ್ರಮವಾಗಿ 3ನೆ ಹಾಗೂ ನಾಲ್ಕನೆ ಸ್ವಚ್ಛ ನಗರ ಎನಿಸಿಕೊಂಡಿವೆ.
2015ರ ಸಮೀಕ್ಷೆಯಲ್ಲಿ ಅಗ್ರ ಸ್ಥಾನದಲ್ಲಿದ್ದ ಕರ್ನಾಟಕದ ಸಾಂಸ್ಕೃತಿಕ ನಗರಿ ಮೈಸೂರು ಈ ಬಾರಿ ಐದನೆ ಸ್ಥಾನಕ್ಕೆ ಕುಸಿದಿದೆ. ತಮಿಳುನಾಡಿನ ತಿರುಚಿರಾಪಳ್ಳಿ, ಹೊಸದಿಲ್ಲಿಯ ಮುನ್ಸಿಪಲ್ ಕೌನ್ಸಿಲ್ ಕ್ರಮವಾಗಿ ಆರನೆ ಹಾಗೂ 7ನೆ ರ್ಯಾಂಕಿನಲ್ಲಿವೆ. ಕೇಂದ್ರ ನಗರಾಭಿವೃದ್ಧಿ ಸಚಿವರಾದ ವೆಂಕಯ್ಯ ನಾಯ್ಡು ಗುರುವಾರ ದೇಶದ ಸ್ವಚ್ಛ ನಗರಗಳ ರ್ಯಾಂಕಿಂಗ್ ಪಟ್ಟಿಯನ್ನು ಘೋಷಿಸಿದರು.
ಮಮತಾ ಬ್ಯಾನರ್ಜಿ ಸರಕಾರ ಸ್ವಚ್ಛ ಸರ್ವೇಕ್ಷಣೆಯಲ್ಲಿ ಭಾಗವಹಿಸದೇ ಇರುವ ಕಾರಣ ಪಶ್ಚಿಮ ಬಂಗಾಳದ ನಗರಗಳು ರ್ಯಾಂಕಿಂಗ್ನಲ್ಲಿ ಸ್ಥಾನ ಪಡೆದಿಲ್ಲ. ಸರ್ವೆಯ ಪ್ರಕಾರ ಅತ್ಯಂತ ಕೊಳಕು ನಗರಗಳಲ್ಲಿ ಉತ್ತರಪ್ರದೇಶದ ನಾಲ್ಕು ನಗರಗಳಿವೆ. ಬಿಹಾರ ಹಾಗೂ ಪಂಜಾಬ್ನ ತಲಾ ಎರಡು, ಉತ್ತರಖಂಡ ಹಾಗೂ ಮಹಾರಾಷ್ಟ್ರದ ತಲಾ ಒಂದು ನಗರಗಳಿವೆ.
ಸ್ವಚ್ಛ ಸರ್ವೇಕ್ಷಣೆಯಲ್ಲಿ ಜಾರ್ಖಂಡ್ ಹಾಗೂ ಛತ್ತೀಸ್ಗಢ ಉತ್ತಮ ಸಾಧನೆ ತೋರಿದ ರಾಜ್ಯಗಳಾಗಿವೆ. ಉತ್ತರಪ್ರದೇಶ ಹಾಗೂ ಬಿಹಾರ ಸ್ವಚ್ಛತೆಯಲ್ಲಿ ತುಂಬಾ ಹಿಂದುಳಿದಿವೆ. 2017ರಲ್ಲಿ ಕೇರಳದ 9 ನಗರಗಳಲ್ಲಿ ಸರ್ವೇಕ್ಷಣೆ ನಡೆಸಲಾಗಿದ್ದು, ಕೋಝಿಕೋಡ್ ಉತ್ತಮ ರ್ಯಾಂಕ್ ಪಡೆದಿದೆ. ನಾಲ್ಕು ನಗರಗಳು 100ಕ್ಕಿಂತ ಕೆಳಗಿನ ರ್ಯಾಂಕ್ ಪಡೆದಿವೆ.







