ಮೇ 12ಕ್ಕೆ ಸರ್ವಪಕ್ಷ ಸಭೆ ಕರೆದ ಚುನಾವಣಾ ಆಯೋಗ
ಇವಿಎಂ ಯಂತ್ರ ದೋಷ ಆರೋಪ ಹಿನ್ನೆಲೆ

ಹೊಸದಿಲ್ಲಿ, ಮೇ 4: ಎಲೆಕ್ಟ್ರಾನಿಕ್ ಮತ ಯಂತ್ರ(ಇವಿಎಂ)ದಲ್ಲಿ ದೋಷವಿದ್ದು, ಅದನ್ನು ತಿರುಚಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಈ ವಿಷಯದ ಬಗ್ಗೆ ಚರ್ಚಿಸಲು ಚುನಾವಣಾ ಆಯೋಗ(ಇಸಿ) ಮೇ 12 ರಂದು ಸರ್ವಪಕ್ಷಗಳ ಸಭೆ ಕರೆದಿದೆ.
ಇವಿಎಂನ್ನು ತಿರುಚಲು ಸಾಧ್ಯವಿಲ್ಲ. ಅದೊಂದು ಸುರಕ್ಷಿತವಾಗಿದೆ ಎಂದು ರಾಜಕೀಯ ಪಕ್ಷಗಳಿಗೆ ವಿಶ್ವಾಸ ಮೂಡಿಸಲು ಶೀಘ್ರವೇ ಸಭೆ ಕರೆಯಲಾಗುತ್ತದೆ ಎಂದು ಎ.29 ರಂದು ಚುನಾವಣಾ ಆಯೋಗ ಘೋಷಿಸಿತ್ತು.
ನಮ್ಮ ಆಡಳಿತಾತ್ಮಕ ಹಾಗೂ ತಾಂತ್ರಿಕ ಸುರಕ್ಷಾ ಪದ್ಧತಿಯ ಪ್ರಕಾರ ಇವಿಎಂ ಹೇಗೆ ಕಾರ್ಯನಿರ್ವಹಿಸುತ್ತಿದೆ. ಅದು ಎಷ್ಟೊಂದು ಸುರಕ್ಷಿತವಾಗಿದೆ ಎಂದು ತಿಳಿಸಲು ನಾವು ಶೀಘ್ರವೇ ಸರ್ವಪಕ್ಷಗಳ ಸಭೆಯೊಂದನ್ನು ಕರೆಯಲಿದ್ದೇವೆ ಎಂದು ಮುಖ್ಯ ಚುನಾವಣಾ ಕಮಿಶನರ್ ನಸೀಂ ಝೈದಿ ಕಳೆದ ತಿಂಗಳು ಸುದ್ದಿಗಾರರಿಗೆ ತಿಳಿಸಿದ್ದರು.
ಮತದಾನದಲ್ಲಿ ಇನ್ನಷ್ಟು ಪಾರದರ್ಶಕತೆ ತರುವ ನಿಟ್ಟಿಯಲ್ಲಿ ಹಾಗೂ ಚುನಾವಣಾ ಪ್ರಕ್ರಿಯೆಯಲ್ಲಿ ದೇಶದ ಜನರ ವಿಶ್ವಾಸವನ್ನು ಹೆಚ್ಚಿಸುವ ಉದ್ದೇಶದಿಂದ ಮತದಾನ ದೃಢೀಕರಣ ಯಂತ್ರ(ವಿವಿಪಿಎಟಿ) ಬಳಸುವ ಬಗ್ಗೆ ಚುನಾವಣಾ ಆಯೋಗ ಯೋಜನೆ ಹಾಕಿಕೊಂಡಿದೆ. ಇದಕ್ಕಾಗಿ ಎಲ್ಲ ಹಣಕಾಸು ನೆರವನ್ನು ಪಡೆಯಲಾಗಿದ್ದು, 2018ರ ಸೆಪ್ಟಂಬರ್‌ಗೆ 15 ಲಕ್ಷ ವಿವಿಪಿಎಟಿ ಯಂತ್ರಗಳು ಸಿದ್ಧವಾಗಲಿವೆ. ಭಾರತ್ ಇಲೆಕ್ಟ್ರಾನಿಕ್ ಲಿಮಿಟೆಡ್ ಹಾಗೂ ಇಲೆಕ್ಟ್ರಾನಿಕ್ ಕಾರ್ಪೋರೇಶನ್ ಆಫ್ ಇಂಡಿಯಾಕ್ಕೆ ಯಂತ್ರಗಳ ಸರಬರಾಜಿಗೆ ಕೋರಿಕೆಯನ್ನು ಸಲ್ಲಿಸಿದ್ದೇವೆ ಎಂದು ಝೈದಿ ತಿಳಿಸಿದ್ದಾರೆ.







