ಗೋರಕ್ಷಕರಿಗೆ ರಕ್ಷಣೆ ನೀಡುವ ಕಾನೂನನ್ನು ಸಮರ್ಥಿಸಿಕೊಂಡ ಕರ್ನಾಟಕ ಸರ್ಕಾರ
ಗೋರಕ್ಷಕರ ನಿಷೇಧಕ್ಕೆ ವಿರೋಧ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ,ಮೇ.4: ರಾಜ್ಯದಲ್ಲಿ ಗೋಹತ್ಯೆಯನ್ನು ತಡೆಯಲು ಗೋರಕ್ಷಕರಿಗೆ ರಕ್ಷಣೆಯನ್ನೊದಗಿಸುವ ತನ್ನ ಕಾನೂನನ್ನು ಬುಧವಾರ ಸರ್ವೋಚ್ಚ ನ್ಯಾಯಾಲಯದಲ್ಲಿ ಸಮರ್ಥಿಸಿಕೊಂಡಿರುವ ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರಕಾರವು, ಸದ್ರಿ ಕಾನೂನಿನ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸುವಂತೆ ಕೋರಿಕೊಂಡಿದೆ.
ಕರ್ನಾಟಕ, ಗುಜರಾತ್, ರಾಜಸ್ಥಾನ, ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಜಾರ್ಖಂಡ್ ರಾಜ್ಯಗಳು ಗೋರಕ್ಷಕ ದಳಗಳ ರಕ್ಷಣೆಗಾಗಿ ಕಾನೂನನ್ನು ರೂಪಿಸಿವೆ. ವಿವಿಧ ಸಮುದಾಯಗಳು ಮತ್ತು ಜಾತಿಗಳ ನಡುವಿನ ಸೌಹಾರ್ದವನ್ನು ಕೆಡಿಸುತ್ತಿರುವ ಆರೋಪದಲ್ಲಿ ಇಂತಹ ಗುಂಪುಗಳನ್ನೇಕೆ ನಿಷೇಧಿಸಬಾರದು ಎಂದು ಕೇಳಿ ನ್ಯಾಯಮೂರ್ತಿಗಳಾದ ದೀಪಕ ಮಿಶ್ರಾ, ಎ.ಎಂ.ಖನ್ವಿಲ್ಕರ್ ಮತ್ತು ಎಂ.ಎಂ. ಶಾಂತನ ಗೌಡರ್ ಅವರ ಪೀಠವು ಈ ಆರು ರಾಜ್ಯಗಳಿಗೆ ನೋಟಿಸ್ಗಳನ್ನು ಜಾರಿಗೊಳಿಸಿತ್ತು.
ಈ ಪೈಕಿ ಕರ್ನಾಟಕವು ಮಾತ್ರ ಸರ್ವೋಚ್ಚ ನ್ಯಾಯಾಲಯಕ್ಕೆ ತನ್ನ ಉತ್ತರವನ್ನು ಸಲ್ಲಿಸಿ, ಕರ್ನಾಟಕ ಗೋಹತ್ಯೆ ತಡೆ ಮತ್ತು ಜಾನುವಾರು ಸಂರಕ್ಷಣೆ ಕಾಯ್ದೆಯನ್ನು ಸಮರ್ಥಿಸಿಕೊಂಡಿದೆ. ಇದು ಕಾಯ್ದೆಯಡಿ ಮಾನ್ಯತೆ ಹೊಂದಿರುವ ಗೋರಕ್ಷಕ ಗುಂಪುಗಳಿಗೆ ಕಾನೂನು ಕ್ರಮದಿಂದ ವಿನಾಯಿತಿ ನೀಡುವ ಅಧಿಕಾರವನ್ನು ಸರಕಾರಕ್ಕೆ ಪ್ರಾಪ್ತವಾಗಿಸಿದೆ.
ಆದರೆ ಸದುದ್ದೇಶದಿಂದ ಕಾರ್ಯ ನಿರ್ವಹಿಸುತ್ತಿರುವ ಗೋರಕ್ಷಕರಿಗೆ ಮಾತ್ರ ರಕ್ಷಣೆಯನ್ನೊದಗಿಸುವುದು ಈ ಕಾಯ್ದೆಯ ಉದ್ದೇಶವಾಗಿದೆ. ಹಿಂಸಾತ್ಮಕ ಅಥವಾ ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿಕೊಂಡವರಿಗೆ ಅಥವಾ ಸಮುದಾಯಗಳ ನಡುವೆ ದ್ವೇಷ ಸೃಷ್ಟಿಸುವವರಿಗೆ ಈ ಕಾನೂನು ಯಾವುದೇ ರಕ್ಷಣೆಯನ್ನು ನೀಡುವುದಿಲ್ಲ ಎಂದು ಕಾಂಗ್ರೆಸ್ ಸರಕಾರವು ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದೆ. ಕಾನೂನುನಡಿ ಸಕ್ಷಮ ಪ್ರಾಧಿಕಾರದಿಂದ ಮಾನ್ಯತೆ ಹೊಂದಿರುವ ಗುಂಪುಗಳಿಗೆ ಮಾತ್ರ ಈ ವಿನಾಯಿತಿಯು ಅನ್ವಯಿಸುತ್ತದೆಯೇ ಹೊರತು ಗೋರಕ್ಷಣೆಯಲ್ಲಿ ತೊಡಗಿಕೊಂಡಿದ್ದೇನೆ ಎಂದು ಹೇಳಿಕೊಳ್ಳುವ ಯಾವುದೋ ಗುಂಪಿಗೆ ಅಲ್ಲ ಎಂದೂ ಅದು ಸ್ಪಷ್ಟಪಡಿಸಿದೆ.
ಈ ಹಳೆಯ ಕಾನೂನು ಹೆಚ್ಚಾಗಿ ಕಾಂಗ್ರೆಸ್ ನೇತೃತ್ವವೇ ಇದ್ದ ವಿವಿಧ ರಾಜ್ಯ ಸರಕಾರಗಳು ರೂಪಿಸಿರುವ ಹಲವಾರು ಕಾನೂನುಗಳಲ್ಲಿ ಒಂದಾಗಿದ್ದರೂ, ಪ್ರಸಕ್ತ ಸಂದರ್ಭದಲ್ಲಿ ಕರ್ನಾಟಕದ ಈ ನಿಲುವು ಮಹತ್ವ ಪಡೆದುಕೊಂಡಿದೆ. ಗೋರಕ್ಷಕರ ದುಂಡಾವರ್ತನೆಗೆ ಬಿಜೆಪಿಯು ಸಂಪೂರ್ಣ ಬೆಂಬಲ ನೀಡುತ್ತಿದೆ ಎಂಬ ಕಾಂಗ್ರೆಸ್ ಮತ್ತು ಇತರ ಪಕ್ಷಗಳ ಆರೋಪಗಳ ನಡುವೆಯೇ ಕರ್ನಾಟಕವು ಈ ಕಾನೂನನ್ನು ಸಮರ್ಥಿಸಿಕೊಂಡಿದೆ.
ಗೋರಕ್ಷಣೆಯ ಸೋಗಿನಲ್ಲಿ ಕಾನೂನನ್ನು ತಮ್ಮ ಕೈಗಳಲ್ಲಿ ತೆಗೆದುಕೊಂಡು ಅಮಾಯಕ ಜನರ ವಿರುದ್ಧ ಗುಂಪು ಹಿಂಸಾಚಾರವನ್ನು ನಡೆಸುತ್ತಿರುವುದಕ್ಕಾಗಿ ಗೋರಕ್ಷಕ ಗುಂಪುಗಳನ್ನು ನಿಷೇಧಿಸುವಂತೆ ಕಾಂಗ್ರೆಸ್ ನಾಯಕ ತೆಹ್ಸೀನ್ ಪೂನಾವಾಲಾ ತನ್ನ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಕೋರಿದ್ದಾರೆ.
ಕೇಂದ್ರ ಮತ್ತು ಇತರ ರಾಜ್ಯಗಳು ತಮ್ಮ ಉತ್ತರಗಳನ್ನು ಸಲ್ಲಿಸುವಲ್ಲಿ ವಿಫಲಗೊಂಡಿರುವ ಹಿನ್ನೆಲೆಯಲ್ಲಿ ಸರ್ವೋಚ್ಚ ನ್ಯಾಯಾಲಯವು ಪ್ರಮಾಣಪತ್ರಗಳನು ಸಲ್ಲಿಸಲು ನಾಲ್ಕು ವಾರಗಳ ಅಂತಿಮ ಗಡುವನ್ನು ಅವುಗಳಿಗೆ ನೀಡಿದೆ.