ಮದೀನದಲ್ಲಿ ಇಂಡಿಯನ್ ಸ್ಕೂಲ್‌ಗೆ ಆಗ್ರಹ

ಮದೀನ,ಮೇ 4: ಮದೀನದಲ್ಲಿ ಇಂಡಿಯನ್ ಸ್ಕೂಲ್ ಸ್ಥಾಪಿಸಬೇಕೆನ್ನುವ ಬಲವಾದ ಬೇಡಿಕೆ ಸೃಷ್ಟಿಯಾಗಿದೆ. ಇಲ್ಲಿವಾಸಿಸುವ ಭಾರತೀಯ ಕುಟುಂಬಗಳ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅಂಗೀಕೃತ ಶಾಲಾ ಸೌಲಭ್ಯವಿಲ್ಲ. ಆದ್ದರಿಂದ ಮಕ್ಕಳ ವಿದ್ಯಾಭ್ಯಾಸ ಮತ್ತು ಉತ್ತಮಭವಿಷ್ಯಕ್ಕಾಗಿ ಇಂಡಿಯನ್ ಸ್ಕೂಲ್‌ನ್ನು ಇಲ್ಲಿನ ಭಾರತೀಯರು ಬಯಸುತ್ತಿದ್ದಾರೆ.
ಸೌದಿ-ಪಾಕಿಸ್ತಾನ ಸಿಲೆಬಸ್‌ನ ಸ್ಕೂಲ್‌ಗೆ ಮಕ್ಕಳನ್ನು ಸೇರಿಸಲು ಬಯಸದ ಭಾರತೀಯರು ಪ್ರೈವೇಟ್ ಟ್ಯೂಶನ್ ಸೆಂಟರ್‌ನ್ನು ಆಶ್ರಯಿಸಬೇಕಾಗಿದೆ. ಹರಂನ ಪರಿಸರದಲ್ಲಿ ಇಂತಹ ಟ್ಯೂಶನ್ ಸೆಂಟರ್‌ಗಳನ್ನೇ ಆಶ್ರಯಿಸಬೇಕಾಗಿದೆ.ಸುಮಾರು ಹತ್ತು ಟ್ಯೂಶನ್ ಸೆಂಟರ್‌ಗಳಲ್ಲಿ ಎಂಟು ನೂರು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಇಲ್ಲಿ ಸಿಬಿಎಸ್‌ಇ ಪಠ್ಯಕ್ರಮದಲ್ಲಿಯೇ ಕಲಿಸಲಾಗುತ್ತಿದೆ. ಆದರೆ ಅವು ಅಧಿಕೃತ ಶಿಕ್ಷಣ ಸಂಸ್ಥೆಗಳಲ್ಲ .ಆದ್ದರಿಂದ ಇಲ್ಲಿನ ಭಾರತೀಯರು ಇಂಡಿಯನ್ ಸ್ಕೂಲ್‌ಗೆ ಆಗ್ರಹಿಸುತ್ತಿದ್ದಾರೆ.
ಮದೀನದಲ್ಲಿ ಕುಟುಂಬ ಸಹಿತ ವಾಸವಿರುವ ಭಾರತೀಯ ವೈದ್ಯರು, ಇಂಜಿನಿಯರ್ ಮುಂತಾದವರು ಇಂಡಿಯನ್ ಸ್ಕೂಲ್‌ನ ಕೊರತೆಯಿಂದ ಹೆಚ್ಚು ತೊಂದರೆ ಅನುಭವಿಸುತ್ತಿದ್ದಾರೆ. ಏಳನೆ ತರಗತಿಯ ನಂತರ ಇವರೆಲ್ಲ ಊರಿನಲ್ಲಿ ಮಕ್ಕಳ ಶಿಕ್ಷಣವನ್ನು ಮುಂದುವರಿಸುತ್ತಿದ್ದಾರೆ. ಹೀಗೆ ಹೆತ್ತವರಿಂದ ಮಕ್ಕಳು ದೂರ ಇರಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇಂಡಿಯನ್ ಸ್ಕೂಲ್‌ಗೆ ಇದಕ್ಕಿಂತ ಮುಂಚೆ ಪ್ರಯತ್ನಿಸಿದ್ದರೂ ಯಶಸ್ವಿಯಾಗಿಲ್ಲ. ಭಾರತೀಯ ದೂತವಾಸದಿಂದ ಸೂಕ್ತ ಸಹಕಾರ ಸಿಕ್ಕಿಲ್ಲ ಎಂದುಹೇಳಲಾಗುತ್ತಿದೆ.







