ಗಾಲಿಕುರ್ಚಿಯನ್ನೇ ಅವಲಂಬಿಸಿರುವ ಈ ಬಾಲಕನಿಗೆ ಐಐಟಿಯಲ್ಲಿ ಪ್ರವೇಶ ಗಿಟ್ಟಿಸಿಕೊಳ್ಳುವ ಕನಸು

ಕೋಲ್ಕತಾ, ಮೇ 4: ಪಶ್ಚಿಮ ಬಂಗಾಳದ ವೆಸ್ಟ್ ಮಿಡ್ನಾಪುರದ 17ರ ಹರೆಯದ ಬಾಲಕ ತುಹಿನ್ ಹುಟ್ಟಿನಿಂದಲೇ 90 ಶೇ. ಅಂಗವೈಕಲ್ಯ ಹೊಂದಿದ್ದು, ಇದೀಗ ಗಾಲಿ ಕುರ್ಚಿಯನ್ನೇ ಅವಲಂಬಿಸಿದ್ದಾನೆ. ಅಂಗವೈಕಲ್ಯವನ್ನು ಮೆಟ್ಟಿ ನಿಂತಿರುವ ಪ್ರತಿಭಾವಂತ ಬಾಲಕ ಬಾಯಲ್ಲಿ ಲೇಖನಿ ಹಿಡಿದು ಬರೆಯಬಲ್ಲ. ತನ್ನ ಗಲ್ಲದಲ್ಲಿ ಕಂಪ್ಯೂಟರ್, ಮೊಬೈಲ್‌ಗಳನ್ನು ಆಪರೇಟ್ ಮಾಡಬಲ್ಲ. 10ನೆ ತರಗತಿ ಪರೀಕ್ಷೆ ಬರೆದಿರುವ ಈತ ಐಐಟಿಯಲ್ಲಿ ಪ್ರವೇಶ ಗಿಟ್ಟಿಸಿಕೊಂಡು ವಿಶ್ವವಿಜ್ಞಾನಿ ಆಗುವ ಕನಸು ಕಾಣುತ್ತಿದ್ದಾನೆ.
1999ರಲ್ಲಿ ಜನಿಸಿರುವ ತುಹಿನ್‌ಗೆ ಖ್ಯಾತ ಸೈದ್ದಾಂತಿಕ ಭೌತ ಶಾಸ್ತ್ರಜ್ಞ ಸ್ಟೀಫನ್ ಹಾಕಿಂಗ್ ಸ್ಫೂರ್ತಿಯಾಗಿದ್ದಾರೆ. ಹಾಕಿಂಗ್ ಕೂಡ ದೇಹದ ಸ್ವಾಧೀನ ಕಳೆದುಕೊಂಡಿದ್ದರು. ವೀಲ್‌ಚೇರ್‌ನ್ನು ಆಶ್ರಯಿಸಿದ್ದ ಅವರು ಸಂವಹನ ನಡೆಸಲು ಕಂಪ್ಯೂಟರೀಕೃತ ಧ್ವನಿಪದ್ಧತಿಯನ್ನು ಅವಲಂಬಿಸಿದ್ದರು.
ಈ ತನಕ 20ಕ್ಕೂ ಅಧಿಕ ಸರ್ಜರಿಗೆ ಒಳಗಾಗಿರುವ ತುಹಿನ್ ಕಲಿಕೆಯಲ್ಲಿ ಯಾವತ್ತೂ ಹಿಂದೆ ಬಿದ್ದಿಲ್ಲ. ಈತ ಓರ್ವ ಅಸಾಮಾನ್ಯ ವಿದ್ಯಾರ್ಥಿಯಾಗಿದ್ದು, ವಿಜ್ಞಾನದಲ್ಲಿ ದೊಡ್ಡ ಹೆಸರು ಮಾಡಲು ಬಯಸಿದ್ದಾನೆ ಎಂದು ಮಗನಿಗಾಗಿ ಕೇಂದ್ರ ಸರಕಾರಿ ಉದ್ಯೋಗವನ್ನು ತ್ಯಾಗ ಮಾಡಿರುವ ತಾಯಿ ಸುಜಾತಾ ಡೇ ಹೇಳಿದ್ದಾರೆ.
ಐಐಟಿ-ಖರಗ್‌ಪುರದ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿ ತುಹಿನ್ ಯಾರ ಸಹಾಯವಿಲ್ಲದೆ, ವಿಕಲಚೇತನರಿಗೆ ನೀಡುವ ಹೆಚ್ಚುವರಿ ಸಮಯ ಪಡೆಯದೇ ಈ ವರ್ಷ 10ನೆ ತರಗತಿಯ ಪರೀಕ್ಷೆಯನ್ನು ಬರೆದಿದ್ದಾನೆ. ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಗಾಗಿ ಕೋಟಾದಲ್ಲಿ ಕೋಚಿಂಗ್ ಪಡೆಯುತ್ತಿದ್ದಾನೆ. ಆತನಿಗೆ ತಂದೆ-ತಾಯಿ ಬೆಂಬಲವಾಗಿ ನಿಂತಿದ್ದಾರೆ.
2012ರಲ್ಲಿ ಅಪೂರ್ವ ಸಾಧನೆಗಾಗಿ ರಾಷ್ಟ್ರೀಯ ಮಕ್ಕಳ ಪ್ರಶಸ್ತಿ, 2013ರಲ್ಲಿ ಶ್ರೇಷ್ಠ ಸೃಜನಶೀಲ ಮಕ್ಕಳ ಪ್ರಶಸ್ತಿಯನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ ಸ್ವೀಕರಿಸಿದ್ದಾರೆ.
ವಿಶ್ವವಿಜ್ಞಾನ ಹಾಗೂ ಕಂಪ್ಯೂಟರ್ ಸೈನ್ಸ್‌ನಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವ ತುಹಿನ್‌ಗೆ ಐಐಟಿಯಲ್ಲಿ ಪ್ರವೇಶ ಪಡೆದು ಮುಂದೊಂದು ದಿನ ತನ್ನ ಆದರ್ಶವ್ಯಕ್ತಿ ಹಾಕಿನ್ಸ್‌ರಂತೆ ದೊಡ್ಡ ಸಾಧನೆ ಮಾಡುವ ಕನಸು ಕಾಣುತ್ತಿದ್ದಾರೆ.
ಮಧ್ಯಮವರ್ಗದ ಕುಟುಂಬದಿಂದ ಬಂದಿರುವ ತುಹಿನ್‌ಗೆ ಪಶ್ಚಿಮ ಬಂಗಾಳದ ದೀನಬಂಧು ಖಾಸಗಿ ಟ್ರಸ್ಟ್ ಲ್ಯಾಪ್‌ಟಾಪ್ ಹಾಗೂ ಟೆಲಿಸ್ಕಾಪ್‌ನ್ನು ಉಡುಗೊರೆಯಾಗಿ ನೀಡಿದ್ದು, ಆತನ ಬಗ್ಗೆ ಸಾಕ್ಷ ಚಿತ್ರ ನಿರ್ಮಿಸಲು ಯೋಜನೆ ಹಾಕಿಕೊಂಡಿದೆ. ತಾಹಿನ್‌ಗೆ ಮತ್ತಷ್ಟು ಆರ್ಥಿಕ ನೆರವು ನೀಡುವ ಭರವಸೆಯನ್ನು ನೀಡಿದೆ.







