ಮುಂಬೈನಲ್ಲಿ ಇಬ್ಬರು ಶಂಕಿತ ಐಎಸ್‌ಐ ಏಜೆಂಟ್‌ಗಳ ಸೆರೆ

ಮುಂಬೈ,ಮೇ 4: ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರ ಭಯೋತ್ಪಾದನೆ ನಿಗ್ರಹ ದಳ(ಎಟಿಎಸ್)ಗಳ ಜಂಟಿ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐನ ಇಬ್ಬರು ಶಂಕಿತ ಏಜೆಂಟ್‌ಗಳನ್ನು ನಗರದಲ್ಲಿ ಬಂಧಿಸಲಾಗಿದೆ.
ಈ ಪೈಕಿ ಅಲ್ತಾಫ್ ಕುರೇಷಿ ಎಂಬಾತನನ್ನು ಬುಧವಾರ ತಡರಾತ್ರಿ ದಕ್ಷಿಣ ಮುಂಬೈನ ಮಸ್ಜಿದ್ ಬಂದರ್ ಪ್ರದೇಶದಿಂದ ಮತ್ತು ಜಾವೇದ್ ಇಕ್ಬಾಲ್ ಎಂಬಾತನನ್ನು ಗುರುವಾರ ಬೆಳಿಗ್ಗೆ ಅಗ್ರಿಪಾಡಾದ ಯೂಸುಫ್ ಮಂಝಿಲ್ ಕಟ್ಟಡದಿಂದ ಬಂಧಿಸಲಾಗಿದೆ ಎಂದು ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.
ಕುರೇಷಿ (37) ಹವಾಲಾ ವ್ಯವಹಾರ ನಡೆಸುತ್ತಿದ್ದು, ಐಎಸ್‌ಐಗಾಗಿಯೂ ಕೆಲಸ ಮಾಡುತ್ತಿದ್ದನೆನ್ನಲಾಗಿದೆ. ಇಕ್ಬಾಲ್ ಕುರೇಷಿಯ ಸಹಾಯಕನಾಗಿ ದುಡಿಯುತ್ತಿದ್ದ.
ಬೇಹುಗಾರಿಕೆ ಚಟುವಟಿಕೆಗಳನ್ನು ನಡೆಸಲು ಇನ್ನೋರ್ವ ಐಎಸ್‌ಐ ಏಜೆಂಟ್ ಅಫ್ತಾಬ್ ಅಲಿ ಎಂಬಾತನ ಬ್ಯಾಂಕ್ ಖಾತೆಗೆ ಕುರೇಷಿ ಹಣ ಜಮಾ ಮಾಡಿದ್ದ ಎಂದು ಅಧಿಕಾರಿ ತಿಳಿಸಿದರು.
ಅಫ್ತಾಬ್‌ನನ್ನು ಬುಧವಾರ ಉತ್ತರ ಪ್ರದೇಶದ ಫೈಝಾಬಾದ್‌ನಲಿ ಬಂಧಿಸಲಾಗಿದೆ.
ಕುರೇಷಿಯ ನಿವಾಸದಿಂದ ಒಂದು ಸೆಲ್‌ಫೋನ್ ಮತ್ತು 71.57 ಲ.ರೂ.ಗಳನ್ನು ಎಟಿಎಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈತ ಜಾವೇದ್ ನವಿವಾಲಾ ಎಂಬಾತನ ಸೂಚನೆಯಂತೆ ಹವಾಲಾ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದ ಎಂದು ಅಧಿಕಾರಿ ತಿಳಿಸಿದರು.
ಪಾಕಿಸ್ತಾನದ ಐಎಸ್‌ಐ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕ ಹೊಂದಿದ್ದ ಜಾವೇದ್ ನವಿವಾಲಾ ಅವರಿಂದ ನಿರ್ದೇಶಗಳನ್ನು ಪಡೆದುಕೊಳ್ಳುತ್ತಿದ್ದ ಮತ್ತು ಆತನ ಸೂಚನೆಯ ಮೇರೆಗೆ ಕುರೇಷಿ ಆಗಾಗ್ಗೆ ಅಫ್ತಾಬ್‌ನ ಬ್ಯಾಂಕ್ ಖಾತೆಗೆ ಹಣವನ್ನು ಜಮಾ ಮಾಡುತ್ತಿದ್ದ ಎನ್ನುವುದು ಬಂಧಿತರ ವಿಚಾರಣೆಯಿಂದ ಬೆಳಕಿಗೆ ಬಂದಿದೆ ಎಂದು ತಿಳಿಸಿದ ಅಧಿಕಾರಿ, ಅವರು ಇನ್ನೂ ಕೆಲವರ ಹೆಸರುಗಳನ್ನು ಬಾಯಿಬಿಟ್ಟಿದ್ದು, ಇನ್ನಷ್ಟು ಬಂಧನ ಗಳಾಗುವ ಸಾಧ್ಯತೆಗಳಿವೆ ಎಂದರು.
ಅಫ್ತಾಬ್ ಭಾರತೀಯ ಸೇನೆಯ ಚಲನವಲನಗಳ ಬಗ್ಗೆ ಪಾಕಿಸ್ತಾನ ರಾಯಭಾರಿ ಕಚೇರಿಯಲ್ಲಿ ನಿಯುಕ್ತರಾಗಿರುವ ಅಧಿಕಾರಿಗಳಿಗೆ ಮತ್ತು ಐಎಸ್‌ಐಗೆ ಮಾಹಿತಿ ನೀಡುತ್ತಿದ್ದ ಎಂದು ಹೇಳಿದ ಅಧಿಕಾರಿ, ಫೈಝಾಬಾದ್ ಲಕ್ನೋ ಮತ್ತು ಅಮೃತಸರಗಳಗಳಲ್ಲಿಯ ಸೇನಾ ಘಟಕಗಳು ಮತ್ತು ಸೇನೆಯ ಚಲನವಲನಗಳ ಬಗ್ಗೆ ಆತ ಮಾಹಿತಿಗಳನ್ನೊದಗಿಸಿದ್ದ ಎಂದರು.







