ಸೋನು ನಿಗಮ್ - ಅಝಾನ್ ವಿವಾದದ ಕುರಿತು ಇರ್ಫಾನ್ ಖಾನ್ ನೀಡಿದ್ದಾರೆ ಚಿಂತನಾರ್ಹ ಹೇಳಿಕೆ

ಮುಂಬೈ,ಮೇ4 : ಖ್ಯಾತ ಹಿನ್ನೆಲೆಗಾಯಕ ಸೋನು ನಿಗಮ್ ಅವರ ಅಝಾನ್ ಕುರಿತಾದ ಹೇಳಿಕೆ ಇತ್ತೀಚೆಗೆ ಬಾಲಿವುಡ್ ಹಾಗೂ ಧಾರ್ಮಿಕ ವಲಯಗಳಲ್ಲಿ ಸಾಕಷ್ಟು ಸಂಚಲನ ಮೂಡಿಸಿತ್ತಲ್ಲದೆ ವಿವಾದವನ್ನೂ ಸೃಷ್ಟಿಸಿತ್ತು. ಆದರೆ ಸೋನು ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯೊಂದನ್ನು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ರದ್ದುಗೊಳಿಸಿದೆ.
ಈಗಾಗಲೇ ಈ ವಿವಾದದ ಬಗ್ಗೆ ಸಾಕಷ್ಟು ಗಣ್ಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರೆ ಇದೀಗ ನಟ ಇರ್ಫಾನ್ ಖಾನ್ ಚಿಂತನಾರ್ಹ ಹೇಳಿಕೆಯೊಂದನ್ನು ನೀಡಿದ್ದಾರೆ.
ಪತ್ರಿಕೆಯೊಂದಿಗೆ ಮಾತನಾಡಿದ ಇರ್ಫಾನ್ ಹೇಳಿದ್ದಿಷ್ಟು. ‘‘ಧ್ವನಿವರ್ಧಕ ವಿಚಾರ ಬಹಳ ದೊಡ್ಡದು. ಮೊದಲಾಗಿ ನಾವು ಒಂದು ಸಮಾಜವಾಗಿ ಸದ್ದಿನ ಬಗ್ಗೆ ಇಷ್ಟೊಂದು ಸೂಕ್ಷ್ಮತೆ ಹೊಂದಿದ್ದೇವೆಯೇ ಎಂದು ಮೊದಲು ಯೋಚಿಸಬೇಕು. ಇತರ ಸ್ಥಳಗಳಿಂದ ಕೇಳಿ ಬರುವ ಸದ್ದಿನ ಬಗ್ಗೆಯೂ ನಾವು ಸೂಕ್ಷ್ಮತೆ ಹೊಂದಿದ್ದೇವೆಯೇ ? ಆಸ್ಪತ್ರೆಯೊಂದರ ಸಮೀಪ ಭಾರೀ ಸದ್ದು ಮಾಡುವ ಡಿಸ್ಕೋಥೆಕ್ ಇದ್ದರೆ ನಾವು ಅದರ ಬಗ್ಗೆ ಮಾತನಾಡುತ್ತೇವೆಯೇ ? ಯಾರಿಗಾದರೂ ಯಾವುದೇ ವಿಷಯದ ಬಗ್ಗೆ ಒಂದು ಸಮಸ್ಯೆಯಿದೆಯೆಂದಾದರೆ ಇಡೀ ವಿಚಾರದ ಕುರಿತಾಗಿ ಎಲ್ಲಾ ಸಮಸ್ಯೆಗಳನ್ನೂ ನಿಭಾಯಿಸಬೇಕು.’’ ‘‘ಬೇರೆ ದೇಶಗಳಲ್ಲಿ ಕಾರಿನ ಹಾರ್ನ್ ವಿಚಾರದಲ್ಲಿ ಕೆಲವೊಂದು ನಿಯಂತ್ರಣಗಳನ್ನು ಹೇರಲಾಗುತ್ತದೆ, ಏಕೆಂದರೆ ಜನರು ಯಾವುದೇ ರೀತಿಯ ಸದ್ದಿಗೆ ಸೂಕ್ಷ್ಮರಾಗಿದ್ದಾರೆ. ಧ್ವನಿವರ್ಧಕವೊಂದರಿಂದ ಕೇಳಿ ಬರುವ ಸದ್ದಿಗೆ ಒಬ್ಬ ವ್ಯಕ್ತಿ ಇಷ್ಟೊಂದು ಒತ್ತಡಕ್ಕೊಳಗಾಗುತ್ತಾನೆಂದಾದರೆ ಅದಕ್ಕೇನು ಕಾರಣವೆಂದು ನಾವು ತಿಳಿಯಬೇಕು. ಅಂತೆಯೇ ಅವರಿಗೆ ಅಝಾನ್ ಗೆ ಉಪಯೋಗಿಸುವ ಧ್ವನಿವರ್ಧಕದ ಬಗ್ಗೆ ಸಮಸ್ಯೆಯಿದೆಯೇ ಇಲ್ಲವೇ ಬೇರೆಡೆಯಲ್ಲಿ ಉಪಯೋಗಿಸುವ ಧ್ವನಿವರ್ಧಕಗಳ ಸದ್ದಿನ ಬಗ್ಗೆಯೂ ಸಮಸ್ಯೆಯಿದೆಯೇ ಎಂದು ಅರಿಯಬೇಕು,’’ ಎಂದು ಹೇಳಿದ್ದಾರೆ ಇರ್ಫಾನ್.