ಭೂಮಿಯ ಹಕ್ಕಿಗಾಗಿ ಮರ ಏರಿ ಧರಣಿ ನಡೆಸಿದ ದಿಡ್ಡಳ್ಳಿ ಹೋರಾಟಗಾರ್ತಿ

ಮಡಿಕೇರಿ, ಮೇ 4: ದಿಢೀರ್ ಬೆಳವಣಿಗೆಯೊಂದರಲ್ಲಿ ದಿಡ್ಡಳಿಯ ಆದಿವಾಸಿ ಹೋರಾಟಗಾರ್ತಿ ಜೆ.ಕೆ.ಮುತ್ತಮ್ಮ ಅವರು ಮರವನ್ನೇರಿ ಭೂಮಿಯ ಹಕ್ಕಿಗಾಗಿ ಉಪವಾಸ ಧರಣಿ ನಡೆಸಿದ ಪ್ರಸಂಗ ಗುರುವಾರ ನಡೆಯಿತು.
ಈ ಹಿಂದೆ ಬೆತ್ತಲೆ ಪ್ರತಿಭಟನೆ ನಡೆಸಿ ಸುದ್ದಿಯಾಗಿದ್ದ ಮುತ್ತಮ್ಮ, ಗುರುವಾರ ಮರವನ್ನೇರುವ ಮೂಲಕ ಆದಿವಾಸಿಗಳ ಹಕ್ಕಿಗಾಗಿ ವಿನೂತನ ರೀತಿಯಲ್ಲಿ ಒತ್ತಾಯಿಸಿದರು. ಐದು ತಿಂಗಳಿನಿಂದ ಸರಕಾರ ದಿಡ್ಡಳ್ಳಿ ನಿರಾಶ್ರಿತರ ಬಗ್ಗೆ ಸ್ಪಷ್ಟ ನಿರ್ಧಾರವನ್ನು ಕೈಗೊಳ್ಳದೆ ಅತಂತ್ರ ಸ್ಥಿತಿಯನ್ನು ಸೃಷ್ಟಿಸಿದೆ ಎಂದು ಮುತ್ತಮ್ಮ ಆರೋಪಿಸಿದರು.
ಈ ಹಿಂದೆ ಆಶ್ರಯ ಪಡೆದಿದ್ದ ಪ್ರದೇಶದಲ್ಲೇ ಗುಡಿಸಲುಗಳನ್ನು ನಿರ್ಮಿಸಿ ಆಡಳಿತ ವ್ಯವಸ್ಥೆಗೆ ಆದಿವಾಸಿಗಳು ಸವಾಲೊಡ್ಡಿದ್ದು, ಇದರ ಭಾಗವಾಗಿ ಮುತ್ತಮ್ಮ ಮರದ ಮೇಲೆ ಧರಣಿ ಆರಂಭಿಸಿದರು. ಇದೀಗ ನಿರ್ಮಿಸಿಕೊಂಡಿರುವ ಗುಡಿಸಲುಗಳನ್ನು ಹಾಗೂ ಆದಿವಾಸಿಗಳನ್ನು ತೆರವುಗೊಳಿಸಬಾರದು ಎಂದು ಒತ್ತಾಯಿಸಿದ ಮುತ್ತಮ್ಮ 50 ಅಡಿ ಎತ್ತರದ ಮರವನ್ನೇರಿದರು. ಭೂಮಿಯ ಹಕ್ಕು ಲಭಿಸುವವರೆಗೆ ಮರದ ಮೇಲೆಯೇ ಉಪವಾಸ ಧರಣಿ ನಡೆಸುವುದಾಗಿ ಘೋಷಿಸಿದರು.
ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಮುತ್ತಮ್ಮರ ಮನವೊಲಿಸುವ ಪ್ರಯತ್ನ ಮಾಡಿದರಾದರೂ ಯಾವುದೇ ಪ್ರಯೋಜನವಾಗಲಿಲ್ಲ.
ಸರಕಾರ ದಿಡ್ಡಳ್ಳಿಯಲ್ಲೇ ಆದಿವಾಸಿಗಳಿಗೆ 5 ಸೆಂಟ್ಸ್ ಜಾಗ ಮತ್ತು ಮೂಲಭೂತ ಸೌಕರ್ಯಗಳನ್ನೊಳಗೊಂಡ ಮನೆ ನಿರ್ಮಿಸಿಕೊಡಬೇಕು. ಸರಕಾರ ಗುರುತಿಸಿದ ಜಾಗಕ್ಕೆ ತೆರಳಬೇಕೆಂದರೆ ವಸತಿ ಜೊತೆಗೆ 2 ಎಕರೆ ಜಾಗವನ್ನು ನೀಡಬೇಕು, ಅಲ್ಲಿಯವರೆಗೆ ಈ ಜಾಗವನ್ನು ಬಿಟ್ಟು ಎಲ್ಲಿಗೂ ಕದಲುವುದಿಲ್ಲ ಎಂದು ಪಟ್ಟು ಹಿಡಿದರು.
ಕಂದಾಯ ಸಚಿವರ ಭರವಸೆ: ಪೋಲಿಸರ ಮಾಹಿತಿಯ ಮೇರೆಗೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ದೂರವಾಣಿ ಮೂಲಕ ಸಂಪರ್ಕಿಸಿದ್ದು, ಜಿಲ್ಲಾಧಿಕಾರಿ ಸ್ಥಳಕ್ಕೆ ಆಗಮಿಸಿ ಸಮಸ್ಯೆ ಬಗೆಹರಿಸುತ್ತಾರೆ ಎಂದು ಭರವಸೆ ನೀಡಿದ ನಂತರ ಮರದಿಂದ ಕೆಳಗಿಳಿದರು.







