ಅಪೂರ್ವಚಂದ್ರ ವರದಿ ಜಾರಿಗೆ ಆಗ್ರಹ: ಮೇ 15ರಿಂದ ಪ್ರತಿ ರವಿವಾರ ಪೆಟ್ರೋಲ್ ಬಂಕ್ ಬಂದ್ ಎಚ್ಚರಿಕೆ

ಬೆಂಗಳೂರು, ಮೇ 4: ಅಪೂರ್ವ ಚಂದ್ರ ವರದಿ ಜಾರಿಗೆ ಆಗ್ರಹಿಸಿ ಮೇ 10ರಂದು ಕಂಪೆನಿಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಖರೀದಿಸದೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಸರಕಾರ ಸಹಕರಿಸದಿದ್ದಲ್ಲಿ ಮೇ 14ರಿಂದ ಏಕಪಾಳಿ ಹಾಗೂ ಮೇ 15ರಿಂದ ರವಿವಾರದಂದು ಬಂಕ್ ಬಂದ್ ಮಾಡಲಾಗುತ್ತದೆ ಎಂದು ಅಖಿಲ ಕರ್ನಾಟಕ ಫೆಡರೇಷನ್ ಆಫ್ ಪೆಟ್ರೋಲಿಯಂ ಟ್ರೇಡರ್ಸ್ ಎಚ್ಚರಿಕೆ ನೀಡಿದೆ.
ಪೆಟ್ರೋಲ್ ಡೀಲರ್‌ಗಳಿಗೆ ನೀಡುತ್ತಿರುವ ಕಮಿಷನ್ ಸೇರಿದಂತೆ ವಿವಿಧ ಭತ್ತೆಗಳನ್ನು ಹೆಚ್ಚಳ ಮಾಡುವ ಸಂಬಂಧ ಸರಕಾರ ರಚಿಸಿದ್ದ ಅಪೂರ್ವ ಚಂದ್ರ ವರದಿಯಲ್ಲಿ ತಿಳಿಸಲಾಗಿದೆ. ಈ ಕುರಿತು ನ.4ರಂದು ನಡೆದ ಸಭೆಯಲ್ಲಿ ಸರಕಾರ ಮತ್ತು ಕಂಪೆನಿಗಳ ಮಾಲಕರ ನಡುವೆ ಒಪ್ಪಂದ ಮಾಡಿಕೊಂಡು ಸಹಿ ಹಾಕಲಾಗಿದೆ. ಆದರೆ, ಇದುವರೆಗೂ ಅದನ್ನು ಜಾರಿ ಮಾಡಲು ಮುಂದಾಗಿಲ್ಲ ಎಂದು ಫೆಡರೇಷನ್ ಅಧ್ಯಕ್ಷ ಬಿ.ಆರ್.ರವೀಂದ್ರನಾಥ್ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಡೀಲರ್ಗಳಿಗೆ ಕಂಪೆನಿಗಳಿಂದ ಲಕ್ಷಾಂತರ ರೂ.ಗಳಷ್ಟು ಹಣ ಬಾಕಿ ಉಳಿಸಿಕೊಳ್ಳಲಾಗಿದೆ. ಇದರಿಂದಾಗಿ ಡೀಲರ್ ಗಳು ಬಂಕ್‌ಗಳನ್ನು ನಡೆಸಲು ಕಷ್ಟವಾಗುತ್ತಿದೆ. ಅಲ್ಲದೆ, ಹಲವರು ಬಂಕ್‌ಗಳನ್ನು ಮಾರಾಟ ಮಾಡುತ್ತಿದ್ದಾರೆ. ಇನ್ನಿತರರು ಸಾಲದ ನಡುವೆ ವ್ಯವಹಾರ ನಡೆಸುವಂತಾಗಿದೆ. ಹೀಗಾಗಿ ಕೂಡಲೇ ಸರಕಾರ ಈ ವರದಿಯನ್ನು ಜಾರಿ ಮಾಡಬೇಕು ಎಂದು ಆಗ್ರಹಿಸಿದರು.
ವರ್ಷದ ಎಲ್ಲ ದಿನಗಳಲ್ಲಿ 24 ಗಂಟೆಯೂ ಪೆಟ್ರೋಲ್ ಬಂಕ್‌ಗಳು ಸಾರ್ವಜನಿರಿಗೆ ಸೇವೆ ನೀಡುತ್ತಿದೆ. ರಾಜ್ಯದಲ್ಲಿ ದಿನನಿತ್ಯ 3 ಸಾವಿರ ಬಂಕ್‌ಗಳಲ್ಲಿ ಸಾವಿರಾರು ಕಾರ್ಮಿಕರು ದುಡಿಯುತ್ತಿದ್ದಾರೆ. ಆದರೆ, ಇವರಿಗೆ ಸರಿಯಾದ ವೇತನ ನೀಡಲು ಸಾಧ್ಯವಾಗುತ್ತಿಲ್ಲ. ಈ ಕುರಿತು ಸರಕಾರದೊಂದಿಗೆ ಮಾತುಕತೆಗೆ ಮುಂದಾದರೆ ಕಂಪೆನಿಯೊಂದಿಗೆ ಮಾತನಾಡಿ ಎಂದು ಹೇಳುತ್ತಿದೆ. ಆದರೆ, ಕಂಪೆನಿಗಳು ಸರಕಾರದ ಮುಂದೆ ಫೈಲ್ ಕಳಿಸಲಾಗಿದೆ ಎಂದು ಸಬೂಬು ನೀಡಲಾಗುತ್ತಿದೆ ಎಂದು ದೂರಿದರು.
ಮೇ 15ರಿಂದ ರವಿವಾರ ರಜೆ: ಸರಕಾರ ಅಪೂರ್ವಚಂದ್ರ ವರದಿ ಜಾರಿ ಮಾಡದಿದ್ದ ಪಕ್ಷದಲ್ಲಿ ಮೇ 15 ರಿಂದ ನಮ್ಮ ಖರ್ಚು-ವೆಚ್ಚಗಳನ್ನು ಸರಿದೂಗಿಸಿಕೊಳ್ಳುವ ಸಲುವಾಗಿ ಪ್ರತಿ ರವಿವಾರ ಬಂಕ್‌ಗಳನ್ನು ಮುಚ್ಚಲಾಗುತ್ತದೆ. ಜೊತೆಗೆ, ಮೇ 14 ರಿಂದ ಎಲ್ಲ ಬಂಕ್‌ಗಳಲ್ಲಿ ಏಕಪಾಳಿ ಕರ್ತವ್ಯ ನಿರ್ವಹಿಸಲಾಗುತ್ತದೆ ಎಂದು ಅವರು ತಿಳಿಸಿದರು







