ಸಾವಿನ ಕ್ಷಣದ ಚಿತ್ರ ತೆಗೆದೇ ನಿರ್ಗಮಿಸಿದ ಸೇನಾ ಛಾಯಾಗ್ರಾಹಕಿ

ವಾಶಿಂಗ್ಟನ್, ಮೇ 4: ಸ್ಫೋಟ ನಡೆದ ಸಂದರ್ಭದಲ್ಲಿ ತಾನು ಸಾಯುವ ಕ್ಷಣದ ಚಿತ್ರ ತೆಗೆದೇ ಅಮೆರಿಕ ಸೇನೆಯ ಛಾಯಾಗ್ರಾಹಕಿಯೊಬ್ಬರು ಇಹಲೋಕ ತ್ಯಜಿಸಿದ ಘಟನೆಯೊಂದು ವರದಿಯಾಗಿದೆ. 2013 ಜುಲೈ 2ರಂದು ನಡೆದ ತರಬೇತಿಯ ವೇಳೆ ಮೋರ್ಟರ್ ಶೆಲ್ಲೊಂದು ಸ್ಫೋಟಿಸಿದಾಗ 22 ವರ್ಷದ ಹಿಲ್ಡಾ ಕ್ಲೇಟನ್ ಮತ್ತು ನಾಲ್ವರು ಅಫ್ಘಾನ್ ನ್ಯಾಶನಲ್ ಆರ್ಮಿ ಸೈನಿಕರು ಸಾವಿಗೀಡಾಗಿದ್ದರು.
ಈ ಸಂದರ್ಭದಲ್ಲಿ ಹಿಲ್ಡಾ ತೆಗೆದ ಚಿತ್ರವನ್ನು ಅಮೆರಿಕ ಸೇನೆ ಬಿಡುಗಡೆ ಮಾಡಿದೆ. ಅಪಘಾತವು ಅಫ್ಘಾನಿಸ್ತಾನದ ಪೂರ್ವದ ಪ್ರಾಂತ ಲಘ್ಮನ್‌ನಲ್ಲಿ ನಡೆದಿದೆ. ‘ಮಿಲಿಟರಿ ರಿವ್ಯೆ’ ನಿಯತಕಾಲಿಕವು ಚಿತ್ರಗಳನ್ನು ಪ್ರಕಟಿಸಿದೆ.
‘‘ತರಬೇತಿ ಮತ್ತು ಯುದ್ಧದ ವೇಳೆ ಎದುರಾಗುವ ಅಪಾಯಕಾರಿ ಪರಿಸ್ಥಿತಿಗಳಿಗೆ ಪುರುಷರಂತೆ ಮಹಿಳೆಯರೂ ಹೇಗೆ ಹೆಚ್ಚು ಹೆಚ್ಚು ಪ್ರಮಾಣದಲ್ಲಿ ಗುರಿಯಾಗುತ್ತಾರೆ ಎಂಬುದನ್ನು ಹಿಲ್ಡಾ ಪ್ರಕರಣ ಹೇಳುತ್ತದೆ’’ ಎಂದು ಪತ್ರಿಕೆಯಲ್ಲಿ ಸೇನೆ ಬರೆದಿದೆ.
ರಕ್ಷಣಾ ಇಲಾಖೆಯು ಹಿಲ್ಡಾ ಗೌರವಾರ್ಥ ಛಾಯಾಚಿತ್ರ ಪ್ರಶಸ್ತಿಯೊಂದನ್ನು ಸ್ಥಾಪಿಸಿದೆ. ಈ ಪ್ರಶಸ್ತಿಗೆ ಅರ್ಹತೆ ಪಡೆಯಲು ಸೇನಾ ಛಾಯಾಚಿತ್ರಗ್ರಾಹಕರು ಐದು ದಿನಗಳ ದೈಹಿಕ ಕ್ಷಮತೆ ಮತ್ತು ತಾಂತ್ರಿಕ ಕೌಶಲ ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕಾಗಿದೆ.







