ಇಂದಿರಾ ಕ್ಯಾಂಟೀನ್ ಆರಂಭಕ್ಕೆ ಸಕಲ ಸಿದ್ಧತೆ: ಕೆ.ಜೆ.ಜಾರ್ಜ್

ಬೆಂಗಳೂರು, ಮೇ 4: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 198 ವಾರ್ಡ್ ಗಳಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸುವ ಸಂಬಂಧ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇಂದಿರಾ ಕ್ಯಾಂಟೀನ್ ಸ್ಥಾಪನೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಭೆಯಲ್ಲಿ ಸವಿಸ್ತಾರವಾಗಿ ಚರ್ಚಿಸಲಾಗಿದೆ ಎಂದರು.
ಪ್ರಸಕ್ತ ಸಾಲಿನ ಆಗಸ್ಟ್ 15ರಂದು ಇಂದಿರಾ ಕ್ಯಾಂಟೀನ್‌ಗಳನ್ನು ಪ್ರಾರಂಭಿಸಲು ಅನುವಾಗುವಂತೆ ಎಲ್ಲ ಪೂರ್ವ ಸಿದ್ಧತಾ ಕಾರ್ಯಗಳ ಉಸ್ತುವಾರಿ ವಹಿಸಲು ತನ್ನ ನೇತೃತ್ವದಲ್ಲಿ ಸಮಿತಿಯನ್ನು ಮುಖ್ಯಮಂತ್ರಿ ರಚಿಸಿದ್ದಾರೆ. ಕ್ಯಾಂಟೀನ್ ವಿನ್ಯಾಸ, ಆಹಾರ ತಯಾರಿಕೆ, ಪೂರೈಕೆ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಆ.15ರಂದು ಬೆಂಗಳೂರಿನ 198 ವಾರ್ಡುಗಳಲ್ಲಿ ಏಕಕಾಲಕ್ಕೆ ಇಂದಿರಾ ಕ್ಯಾಂಟೀನ್ ಆರಂಭಿಸುತ್ತೇವೆ. ಅಷ್ಟರಲ್ಲಿಯೆ ಎಲ್ಲ ಅಗತ್ಯ ತಯಾರಿಗಳನ್ನು ಮಾಡಿಕೊಳ್ಳುತ್ತೇವೆ ಎಂದು ಅವರು ತಿಳಿಸಿದರು.
"ಆಹಾರ ತಯಾರಿಕೆ, ಕ್ಯಾಂಟೀನ್ ಉಸ್ತುವಾರಿಗೆ ಆಸಕ್ತರಿಂದ ಸದ್ಯದಲ್ಲಿಯೆ ಅರ್ಜಿಯನ್ನು ಆಹ್ವಾನಿಸಲಾಗುವುದು. ಆನಂತರ, ನನ್ನ ನೇತೃತ್ವದ ಸಮಿತಿಯು ಪರಿಶೀಲನೆ ನಡೆಸಿ ಸೂಕ್ತ ಸಂಸ್ಥೆಗೆ ನೀಡುವ ಕುರಿತು ನಿರ್ಧರಿಸಲಿದೆ" ಎಂದು ಜಾರ್ಜ್ ಹೇಳಿದರು.
2017-18ನೆ ಸಾಲಿನ ಬಜೆಟ್‌ನಲ್ಲಿ ಘೋಷಿಸಿರುವಂತೆ ಜನ ಸಾಮಾನ್ಯರಿಗೆ ಊಟ ಮತ್ತು ಉಪಾಹಾರಗಳನ್ನು ಕೈಗೆಟಕುವ ದರದಲ್ಲಿ ಒದಗಿಸುವ ಸಲುವಾಗಿ ‘ಇಂದಿರಾ ಕ್ಯಾಂಟೀನ್’ ಆರಂಭಿಸುತ್ತಿದ್ದೇವೆ. ಬೆಳಗಿನ ಉಪಾಹಾರ 5 ರೂ.ಗಳಿಗೆ , ಮಧ್ಯಾಹ್ನ ಹಾಗೂ ರಾತ್ರಿ ಊಟವನ್ನು 10 ರೂ.ಗಳಿಗೆ ಒದಗಿಸುವ ಉದ್ದೇಶಕ್ಕಾಗಿ 100 ಕೋಟಿ ರೂ.ಅನುದಾನವನ್ನು ಬಜೆಟ್‌ನಲ್ಲಿ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು.
ಬೆಳ್ಳಂದೂರು ಕೆರೆಯ ಸ್ವಚ್ಛತೆಗೆ ರಾಜ್ಯ ಸರಕಾರವು ಎನ್‌ಜಿಟಿ ಆದೇಶ ನೀಡುವುದಕ್ಕಿಂತ ಮೊದಲೇ ಕ್ರಮ ಕೈಗೊಂಡಿದೆ. 7 ತಿಂಗಳಿನಿಂದ ಎರಡು ಹಂತಗಳಲ್ಲಿ ಸ್ವಚ್ಛತಾ ಕಾರ್ಯ ನಡೆಯುತ್ತಿದೆ. ಕೆರೆಯ ಸುತ್ತಮುತ್ತಲ ಕೈಗಾರಿಕೆಗಳು ಮಲಿನ ನೀರು ಕೆರೆಗೆ ಬಿಡದಂತೆ ಎಚ್ಚರಿಕೆ ನೀಡಲಾಗಿದೆ. ಎನ್‌ಜಿಟಿ ಆದೇಶ ನೀಡಿದ ನಂತರ ಸರಕಾರ ಎಚ್ಚೆತ್ತುಕೊಂಡಿದೆ ಎಂಬುದು ಸುಳ್ಳು ಎಂದು ಅವರು ಸ್ಪಷ್ಟಣೆ ನೀಡಿದರು.
ಇಂದಿರಾ ಕ್ಯಾಂಟೀನ್ ಉಸ್ತುವಾರಿ ಸಮಿತಿಗೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್, ಮೇಯರ್ ಜಿ.ಪದ್ಮಾವತಿ, ನಗರಾಭಿವೃದ್ಧಿ ಇಲಾಖೆಯ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷರು, ಬಿಬಿಎಂಪಿ ಆಯುಕ್ತರು, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ, ಬಿಬಿಎಂಪಿ ವಿಶೇಷ ಆಯುಕ್ತ(ಹಣಕಾಸು)ರನ್ನು ಸದಸ್ಯರನ್ನಾಗಿ ಹಾಗೂ ನಗರಾಭಿವೃದ್ಧಿ ಇಲಾಖೆಯ ಸರಕಾರದ ಉಪ ಕಾರ್ಯದರ್ಶಿ-3 ಇವರನ್ನು ಸಂಚಾಲಕರನ್ನಾಗಿ ನೇಮಿಸಿ ಆದೇಶ ಹೊರಡಿಸಲಾಗಿದೆ ಎಂದು ಜಾರ್ಜ್ ಹೇಳಿದರು







