ಖಲಿಸ್ತಾನ ಧ್ವಜಗಳಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕೆನಡ ಪ್ರಧಾನಿ

ಟೊರಾಂಟೊ, ಮೇ 4: ಟೊರಾಂಟೊದಲ್ಲಿ ಖಲಿಸ್ತಾನದ ಧ್ವಜಗಳು ಮತ್ತು ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆಯ ಚಿತ್ರಗಳುಳ್ಳ ವೇದಿಕೆಯೊಂದರಲ್ಲಿ ಕೆನಡ ಪ್ರಧಾನಿ ಜಸ್ಟಿನ್ ಟ್ರೂಡೊ ಭಾಗವಹಿಸಿರುವುದು ಭಾರತದಲ್ಲಿ ಕಳವಳಕ್ಕೆ ಕಾರಣವಾಗಿದೆ.
ಈ ಹಿಂದೆ ವ್ಯಾಂಕೂವರ್‌ನಲ್ಲಿ ನಡೆದ ವಾರ್ಷಿಕ ನಗರ್ ಕೀರ್ತನ್ ಕಾರ್ಯಕ್ರಮವು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮೇಲೆ ವಾಗ್ದಾಳಿ ನಡೆಸಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ರವಿವಾರ ನಡೆದ ಟೊರಾಂಟೊ ನಗರ್ ಕೀರ್ತನ್‌ನಲ್ಲಿ ಈ ಬೆಳವಣಿಗೆ ನಡೆದಿದೆ. ಅಂದು ನಡೆದ ಕಾರ್ಯಕ್ರಮದಲ್ಲಿ ಕಳೆದ ತಿಂಗಳು ಒಂಟಾರಿಯೊ ವಿಧಾನಸಭೆ ಅಂಗೀಕರಿಸಿದ ನಿರ್ಣಯವೊಂದನ್ನು ಶ್ಲಾಘಿಸಲಾಯಿತು. 1984ರ ಸಿಖ್ ವಿರೋಧಿ ಹಿಂಸಾಚಾರವನ್ನು ‘ಜನಾಂಗೀಯ ಹತ್ಯೆ’ ಎಂಬುದಾಗಿ ಬಣ್ಣಿಸುವ ನಿರ್ಣಯವನ್ನು ಒಂಟಾರಿಯೊ ವಿಧಾನಸಭೆ ಅಂಗೀಕರಿಸಿತ್ತು.
ಖಾಲ್ಸಾ ದಿನಾಚರಣೆಯಲ್ಲಿ ಕೆನಡ ಪ್ರಧಾನಿ ಭಾಗವಹಿಸುವುದು ಖಂಡಿತವಾಗಿಯೂ ಕಳವಳದ ವಿಷಯವಾಗಿದೆ ಎಂದು ಭಾರತದ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.
1980ರ ದಶಕದಲ್ಲಿ ಪ್ರತ್ಯೇಕ ಖಲಿಸ್ತಾನ ರಾಜ್ಯ ಚಳವಳಿಯ ಮುಂಚೂಣಿಯಲ್ಲಿದ್ದ ಉಗ್ರ ಭಿಂದ್ರನ್‌ವಾಲೆಯನ್ನು ಭಾರತೀಯ ಸೇನೆ 1984ರ ಜೂನ್‌ನಲ್ಲಿ ನಡೆಸಿದ ‘ಆಪರೇಶನ್ ಬ್ಲೂ ಸ್ಟಾರ್’ ಕಾರ್ಯಾಚರಣೆಯಲ್ಲಿ ಕೊಂದು ಹಾಕಿತ್ತು.





