ಅಧಿಕಾರಿಗಳು, ಜನಪ್ರತಿನಿಧಿಗಳು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಿ: ರಮೇಶ್‌ಕುಮಾರ್
ನಾಲ್ಕು ದಿನಗಳ ಬೃಹತ್ ಆರೋಗ್ಯ ಮೇಳ

ಬೆಂಗಳೂರು, ಮೇ 4: ಸರಕಾರಿ ಅಧಿಕಾರಿಗಳು, ಶಾಸಕರು ಹಾಗೂ ಸಚಿವರು ರೋಗಗಳಿಗೆ ಚಿಕಿತ್ಸೆ ಪಡೆಯುವುದಕ್ಕೆ ಸರಕಾರಿ ಆಸ್ಪತ್ರೆಗಳನ್ನೇ ಮೊದಲ ಆದ್ಯತೆ ಮಾಡಿಕೊಳ್ಳಬೇಕು ಎಂದು ಆರೋಗ್ಯ ಸಚಿವ ರಮೇಶ್‌ಕುಮಾರ್ ತಿಳಿಸಿದ್ದಾರೆ.
ಗುರುವಾರ ನಗರದ ಆರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ನಾಲ್ಕು ದಿನಗಳ ಬೃಹತ್ ಆರೋಗ್ಯ ಮೇಳದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಚಿಕಿತ್ಸೆ ಸರಕಾರಿ ಆಸ್ಪತ್ರೆಯಲ್ಲಿ ಲಭ್ಯವಿಲ್ಲವೋ ಆ ಸಂದರ್ಭದಲ್ಲಿ ಮಾತ್ರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಿ ಎಂದು ಅವರು ಆಶಿಸಿದರು.
ರಾಜ್ಯದಲ್ಲಿ ಬಡವ-ಶ್ರೀಮಂತರೆನ್ನದೆ ಪ್ರತಿಯೊಬ್ಬರಿಗೂ ಗುಣಮಟ್ಟದ ಆರೋಗ್ಯವನ್ನು ನೀಡುವ ನಿಟ್ಟಿನಲ್ಲಿ ರಾಜ್ಯ ಸರಕಾರ ಯೂನಿವರ್ಸಲ್ ಹೆಲ್ತ್ ಕಾರ್ಡ್‌ನ್ನು ಜಾರಿಗೆ ತರುವ ನಿಟ್ಟಿನಲ್ಲಿ ಚಿಂತನೆ ನಡೆಸಿದೆ. ಈ ಸಂಬಂಧ 8ರಿಂದ 10ಇಲಾಖೆಗಳೊಂದಿಗೆ ಚಿಂತನೆ ನಡೆಸಲಾಗುತ್ತಿದೆ. ಸುಮಾರು 800ರಿಂದ 900ಕೋಟಿ ರೂ.ಮೊತ್ತದ ಯೋಜನೆ ಇದಾಗಿದೆ ಎಂದು ಅವರು ಹೇಳಿದರು.
200ಜನರಿಕ್ ಮಳಿಗೆ: ಜೂನ್ ಅಂತ್ಯದ ವೇಳೆಗೆ 200 ಜನರಿಕ್ ಮಳಿಗೆಗಳನ್ನು ತೆರೆಯಲು ಸರಕಾರ ಎಲ್ಲ ರೀತಿಯ ಕ್ರಮಗಳನ್ನು ಕೈಗೊಂಡಿದೆ. ಈ ಸಂಬಂಧ ಕೇಂದ್ರ ಹಾಗೂ ರಾಜ್ಯ ಸರಕಾರ ಒಪ್ಪಂದವನ್ನು ಮಾಡಿಕೊಂಡಿದ್ದು, ಈಗಾಗಲೇ 80 ಮಳಿಗೆಗಳು ಕಾರ್ಯಾರಂಭ ಮಾಡಿವೆ ಎಂದು ಅವರು ತಿಳಿಸಿದರು.
ರಾಜ್ಯದ 2150 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪೈಕಿ 30ಕಡೆ ವೈದ್ಯರ ಕೊರತೆ ಇದೆ. ಅದನ್ನು ಹೊರತು ಪಡಿಸಿದರೆ ಎಲ್ಲ ಕಡೆ ವೈದ್ಯರುಗಳು ಕೆಲಸ ಮಾಡುತ್ತಿದ್ದಾರೆ. ಇನ್ನೊಂದು ತಿಂಗಳೊಳಗಾಗಿ ರಾಜ್ಯದ ಎಲ್ಲ ತಾಲೂಕು ಮತ್ತು ಜಿಲ್ಲಾಸ್ಪತ್ರೆಗಳಲ್ಲಿ ಡಯಾಲಿಸಿಸ್ ಕೇಂದ್ರ ಕಾರ್ಯಾರಂಭ ಮಾಡಲಿದೆ. ನಂತರ ವಿವಿಧ ಪ್ರಾಥಮಿಕ ಕೇಂದ್ರಗಳಲ್ಲಿ ಡಯಾಲಿಸಿಸ್ ಘಟಕಗಳನ್ನು ತೆರೆಯಲಾಗುವುದು ಎಂದು ಅವರು ಹೇಳಿದರು.







