ಸುಂದರ ನಗರ ಪುಣೆ ಈಗ ತ್ಯಾಜ್ಯ ತುಂಬಿದ ನರಕ

ಪುಣೆ,ಮೇ 4: ಸುಂದರ, ಪ್ರಶಾಂತ ನಗರ ಎಂಬ ಹೆಗ್ಗಳಿಕೆ ಹೊಂದಿರುವ ಪುಣೆಯ ನಿವಾಸಿಗಳೀಗ ಬೆಳಿಗ್ಗೆ ಹಾಸಿಗೆಯಿಂದ ಏಳುವಾಗಲೇ ದುರ್ನಾತ ಅವರನ್ನು ಕಾಡುತ್ತಿದೆ. ಇಷ್ಟು ದಿನ ಪುಣೆಯ ತ್ಯಾಜ್ಯವನ್ನೆಲ್ಲ ತಮ್ಮ ಒಡಲೊಳಗೆ ಬಸಿದುಕೊಳ್ಳುತ್ತಿದ್ದ ಗ್ರಾಮಗಳ ಜನರು ಕಳೆದೆರಡು ವಾರಗಳಿಂದ ಈ ಪರಿಪಾಠಕ್ಕೆ ತಡೆಯೊಡ್ಡಿದ್ದಾರೆ. ಪರಿಣಾಮ ಪುಣೆ ನಗರದ ಎಲ್ಲೆಲ್ಲಿಯೂ ತ್ಯಾಜ್ಯ ರಾಶಿರಾಶಿಯಾಗಿ ಬಿದ್ದುಕೊಂಡಿದೆ.
ವ್ಯಂಗ್ಯವೆಂದರೆ ಮಂಗಳವಾರ ಪುಣೆಯ ನಿವಾಸಿಗಳು ತ್ಯಾಜ್ಯ ಸಂಕಟದ ಇನ್ನೊಂದು ದಿನಕ್ಕೆ ಅಣಿಯಾಗುತ್ತಿದ್ದರೆ ಅತ್ತ ದೂರದ ದಿಲ್ಲಿಯಲ್ಲಿ ಕೇಂದ್ರ ನಗರಾಭಿವೃದ್ಧಿ ಸಚಿವ ಎಂ.ವೆಂಕಯ್ಯ ನಾಯ್ಡು ಅವರು ಭಾರತದ ಅತ್ಯಂತ ಸ್ವಚ್ಛ ನಗರಗಳ ಪಟ್ಟಿಯನ್ನು ಪ್ರಕಟಿಸುತ್ತಿದ್ದರು!
ತ್ಯಾಜ್ಯ ನಿರ್ವಹಣೆ ಬಿಕ್ಕಟ್ಟು ತೀವ್ರಗೊಂಡಿರುವ ಈ ಸಮಯದಲ್ಲಿ ಪುಣೆ ಮೇಯರ್ ಮುಕ್ತಾ ಟಿಳಕ್ ಅವರು ಮೆಕ್ಸಿಕೊದಲ್ಲಿದ್ದರೆ, ಪುಣೆ ಜಿಲ್ಲಾ ಉಸ್ತುವಾರಿ ಸಚಿವ ಗಿರೀಶ ಬಾಪಟ್ ಅವರು ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾರೆ. ಹೀಗಾಗಿ ಈ ಸಂಕಷ್ಟ ಶೀಘ್ರವೇ ಪರಿಹಾರಗೊಳ್ಳುತ್ತದೆ ಎಂಬ ಯಾವುದೇ ಆಸೆಯೂ ಪುಣೆ ನಿವಾಸಿಗಳಿಗೆ ಉಳಿದಿಲ್ಲ.
ಪುಣೆ ಮತ್ತು 25 ಕಿ.ಮೀ.ದೂರದಲ್ಲಿರುವ ಉರುಳಿ ದೇವಾಚಿ ಮತ್ತು ಫರ್ಸುಂಗಿ ಅವಳಿ ಗ್ರಾಮಗಳ ಜನರಿಗೆ ಸ್ವಚ್ಛ ಭಾರತ ದೂರದ ಕನಸಾಗಬಹುದು. ಇಷ್ಟು ವರ್ಷಗಳ ಕಾಲ ಮಾಲಿನ್ಯಭರಿತ ಗಾಳಿಯನ್ನು ಉಸಿರಾಡಿ, ಆರೋಗ್ಯವನ್ನೂ ಕೆಡಿಸಿಕೊಂಡ ಯಮಯಾತನೆಯ ಬಳಿಕ ಎರಡು ವಾರಗಳ ಹಿಂದೆ ಕೆರಳಿ ನಿಂತಿರುವ ಇವೆರಡು ಗ್ರಾಮಗಳ ಜನರು ಪುಣೆ ನಗರದ ತ್ಯಾಜ್ಯವನ್ನು ತಮ್ಮ ಮನೆಗಳ ಸಮೀಪವೇ ಇರುವ ಯಾರ್ಡ್‌ಗೆ ತಂದು ಸುರಿಯುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಬುಧವಾರ ಪುಣೆ ಮಹಾನಗರ ಪಾಲಿಕೆ ಎದುರು ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದ ಅವರು ತ್ಯಾಜ್ಯ ಸುರಿಯುವ ಯಾರ್ಡ್‌ನ ಅಣಕು ಶವಯಾತ್ರೆಯನ್ನೂ ನಡೆಸಿದ್ದಾರೆ.
ಈ ಗ್ರಾಮಗಳಲ್ಲಿರುವ ಮಹಾನಗರ ಪಾಲಿಕೆಯ ಯಾರ್ಡ್‌ನಲ್ಲಿ ದಿನವೂ ತ್ಯಾಜ್ಯ ಗಳನ್ನು ತಂದು ಸುರಿಯಲಾಗುತ್ತದೆ. ಇಲ್ಲಿಯೇ ತ್ಯಾಜ್ಯ ನಿರ್ವಹಣೆ ಮತ್ತು ಸಂಸ್ಕರಣೆ ಸ್ಥಾವರಗಳೂ ಇವೆ.
ಪುಣೆ ನಗರದಲ್ಲಿ ಪ್ರತಿದಿನ 1,600 ಟನ್ ತ್ಯಾಜ್ಯ ಉತ್ಪಾದನೆಯಾಗುತ್ತಿದ್ದು, ಈ ಪೈಕಿ 1,000 ಟನ್ ತ್ಯಾಜ್ಯವನ್ನು ನಗರ ಮಿತಿಯಲ್ಲಿಯೇ ಸಂಸ್ಕರಿಸಲಾಗುತ್ತದೆ. ಉಳಿದ 600 ಟನ್ ತ್ಯಾಜ್ಯವನ್ನು ಅವಳಿ ಗ್ರಾಮಗಳಿಗೆ ಸಾಗಿಸಲಾಗುತ್ತದೆ ಎಂದು ಪಾಲಿಕೆಯ ಅಧಿಕಾರಿಗಳು ತಿಳಿಸಿದರು.







