ತುರ್ತು ಸಂದರ್ಭಗಳಲ್ಲೂ ಆ್ಯಂಬುಲೆನ್ಸ್ ಗಳನ್ನು ತಡೆಯಬೇಡಿ: ಮುಖ್ಯಮಂತ್ರಿ ಸೂಚನೆ

ಬೆಂಗಳೂರು, ಮೇ 4: "ಪ್ರತಿಯೊಂದು ಜೀವವೂ ಅಮೂಲ್ಯವಾಗಿದ್ದು, ತುರ್ತು ಚಿಕಿತ್ಸೆಗಾಗಿ ತೆರಳುತ್ತಿರುವ ಆ್ಯಂಬುಲೆನ್ಸ್ ಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬಾರದು. ಇತ್ತೀಚಿಗೆ ನನ್ನ ಹಾಗೂ ಬೆಂಗಾವಲಿನ ಕಾರುಗಳು ಸಂಚರಿಸುವುದಕ್ಕಾಗಿ ಆ್ಯಂಬುಲೆನ್ಸ್ನ್ನು ತಡೆಹಿಡಿಯಲಾಗಿತ್ತು ಎಂಬ ಬಗ್ಗೆ ನನಗೆ ಮಾಹಿತಿ ಇರಲಿಲ್ಲ. ಇನ್ನು ಮುಂದಿನ ದಿನಗಳಲ್ಲಿ ಆ್ಯಂಬುಲೆನ್ಸ್ ವಾಹನಗಳಿಗೆ ಮೊದಲ ಆದ್ಯತೆ ನೀಡಲಾಗುವುದು. ಎಂತಹದ್ದೇ ಸಂದರ್ಭದಲ್ಲೂ ತುರ್ತು ವಾಹನಗಳಿಗೆ ತಡೆ ಹಾಕಬಾರದು" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಆರೋಗ್ಯ ಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಪಾಯದಲ್ಲಿರುವ ಪ್ರತಿಯೊಂದು ಜೀವವನ್ನು ಉಳಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಆ್ಯಂಬುಲೆನ್ಸ್ ನಂತಹ ತುರ್ತು ಸೇವಾ ವಾಹನಗಳು ತೆರಳುವಾಗ ತಡೆ ಹಾಕಬಾರದು ಎಂದು ಸೂಚಿಸಿದರು.
ಆರೋಗ್ಯ ಸಚಿವ ರಮೇಶ್‌ಕುಮಾರ್ ಮಾತನಾಡಿ, ಮುಖ್ಯಮಂತ್ರಿಗಳ ಕಾರು ತೆರಳುವುದಕ್ಕಾಗಿ ಆಂಬುಲೆನ್ಸ್ ವಾಹನವನ್ನು ತಡೆಹಿಡಿಯುವುದು ಸರಿಯಲ್ಲ. ಆಂಬುಲೆನ್ಸ್ ವಾಹನಕ್ಕೆ ಮೊದಲ ಆದ್ಯತೆ ಕೊಡುವುದರಿಂದ ಪೊಲೀಸರಿಗೆ ಯಾವುದೆ ಶಿಕ್ಷೆಯೂ ಆಗುವುದಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಆ್ಯಂಬುಲೆನ್ಸ್ ವಾಹನಗಳ ಸಂಚಾರಕ್ಕೆ ಮೊದಲ ಆದ್ಯತೆ ಕೊಡಬೇಕು ಎಂದು ಸೂಚಿಸಿದರು.







