ಉದ್ಯೋಗ ಖಾತ್ರಿ ಕೆಲಸ ತೀವ್ರಗೊಳಿಸಲು ಉಸ್ತುವಾರಿ ಕಾರ್ಯದರ್ಶಿ ಸೂಚನೆ

ಮಂಗಳೂರು, ಮೇ 4: ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಸೃಜಿಸಲಾಗುವ ದುಡಿಮೆಗಳನ್ನು ಇನ್ನಷ್ಟು ತೀವ್ರಗೊಳಿಸುವ ಮೂಲಕ ನಿಗದಿತ ಅವಧಿಯಲ್ಲಿ ಗುರಿ ತಲುಪಬೇಕು ಎಂದು ರಾಜ್ಯ ಸರಕಾರದ ಆರ್ಥಿಕ ಇಲಾಖೆ ಕಾರ್ಯದರ್ಶಿ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಸುಚಿಸಿದ್ದಾರೆ
ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
2017-18ರಲ್ಲಿ ದ.ಕ. ಜಿಲ್ಲೆಯಲ್ಲಿ 17.37 ಲಕ್ಷ ಮಾನವ ದಿನಗಳನ್ನು ಉದ್ಯೋಗ ಖಾತ್ರಿ ಯೋಜನೆಯಡಿ ಗುರಿ ನಿಗದಿಪಡಿಸಲಾಗಿದೆ. ಮುಖ್ಯಮಂತ್ರಿಯ ಸೂಚನೆಯಂತೆ ಮೊದಲ ತ್ರೈಮಾಸಿಕದಲ್ಲಿ ಇದರ ಶೇಕಡಾ 40ರಷ್ಟು ಗುರಿ ಸಾಧಿಸಲೇಬೇಕು. ಪ್ರಸಕ್ತ ಈ ಗುರಿ ಸಾಧನೆಯಲ್ಲಿ ಜಿಲ್ಲೆ ಹಿಂದೆ ಇದ್ದು, ನಿಗದಿತ ಅವಧಿಯಲ್ಲಿ ಇದನ್ನು ಮುಟ್ಟದಿದ್ದರೆ ಸಂಬಂಧಪಟ್ಟ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳನ್ನೇ ಹೊಣೆಗಾರರನ್ನಾಗಿಸಲಾಗುವುದು ಎಂದು ಅವರು ಎಚ್ಚರಿಸಿದರು.
ಉದ್ಯೋಗ ಖಾತ್ರಿ ಕಾರ್ಯಕ್ರಮಗಳ ಮೇಲೆ ನೇರ ನಿಗಾ ಇಟ್ಟು ಪರಿಶೀಲನೆ ನಡೆಸುವಂತೆ ಅವರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗೆ ಸೂಚಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 157 ಶುದ್ಧ ನೀರು ಘಟಕಗಳಿಗೆ ಮಂಜೂರಾತಿ ದೊರಕಿ, 79 ಸ್ಥಾಪನೆಯಾಗಿದ್ದರೂ, ಕೇವಲ 6 ಘಟಕಗಳಲ್ಲಿ ಮಾತ್ರ ಸಾರ್ವಜನಿಕರಿಗೆ ನೀರು ಸರಬರಾಜಾಗುತ್ತಿರುವ ಬಗ್ಗೆ ಉಸ್ತುವಾರಿ ಕಾರ್ಯದರ್ಶಿಗಳು ಅಸಮಾಧಾನ ವ್ಯಕ್ತಪಡಿಸಿದರು. ಸಣ್ಣಪುಟ್ಟ ಕೆಲಸಗಳಿಗಾಗಿ ಇಡೀ ಶುದ್ಧ ನೀರಿನ ಘಟಕವನ್ನು ಕಾರ್ಯಾಚರಣೆಗೊಳಿಸದಿರುವುದಕ್ಕೆ ಯೋಜನೆ ಅನುಷ್ಠಾನ ವಹಿಸಿಕೊಂಡಿರುವ ಕೆಆರ್‌ಐಡಿಎಲ್ ಅಧಿಕಾರಿಯನ್ನು ಪ್ರಶ್ನಿಸಿದ ಅವರು, ಸ್ಥಾಪನೆಯಾಗಿರುವ ಎಲ್ಲಾ ಘಟಕಗಳಲ್ಲಿ ಕೂಡಲೇ ನೀರು ಸರಬರಾಜು ಮಾಡಲು ಅಗತ್ಯ ಕ್ರಮವನ್ನು ತ್ವರಿತವಾಗಿ ನಡೆಸುವಂತೆ ತಾಕೀತು ಮಾಡಿದರು.
ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ಕುಡಿಯುವ ನೀರು ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಪೂರ್ಣಗೊಂಡಿರುವ ಯೋಜನೆಗಳಿಗೆ ಪಾವತಿಯನ್ನು ವಿಳಂಬ ಮಾಡಬಾರದು. ಟಾಸ್ಕ್‌ಫೋರ್ಸ್‌ನಲ್ಲಿ ಕೈಗೆತ್ತಿಕೊಂಡು ಪೂರ್ಣಗೊಂಡಿರುವ ಎಲ್ಲಾ ಕಾಮಗಾರಿಗಳಿಗೆ ಒಂದು ವಾರದೊಳಗೆ ಪಾವತಿಯನ್ನು ಚುಕ್ತಾ ಮಾಡಲು ಅವರು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕೆ.ಜಿ. ಜಗದೀಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಂ.ಆರ್.ರವಿ, ಕೆಯುಐಡಿಎಫ್‌ಸಿ ಜಂಟಿ ವ್ಯವಸ್ಥಾಪಕ ನಿರ್ದೇಶಕಿ ತನುಶ್ರೀ ದೇಬ್ ಬರ್ಮ, ಪುತ್ತೂರು ಉಪವಿಭಾಗಾಧಿಕಾರಿ ಡಾ. ರಘುನಂದನಮೂರ್ತಿ, ಅಪರ ಜಿಲ್ಲಾಧಿಕಾರಿ ಕುಮಾರ್, ಮಹಾನಗರಪಾಲಿಕೆ ಆಯುಕ್ತ ಮುಹಮ್ಮದ್ ನಝೀರ್ ಉಪಸ್ಥಿತರಿದ್ದರು.







