ಭಾರತೀಯ ಸಮಾಜದಲ್ಲಿ ಕುಟುಂಬ ವ್ಯವಸ್ಥೆಗೆ ಹೆಚ್ಚಿನ ಮಹತ್ವ: ಡಾ.ಡಿ.ವೀರೇಂದ್ರ ಹೆಗ್ಗಡೆ
ಧರ್ಮಸ್ಧಳದಲ್ಲಿ 46ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ

ಬೆಳ್ತಂಗಡಿ, ಮೇ 4: ಭಾರತೀಯ ಸಮಾಜದಲ್ಲಿ ಕುಟುಂಬ ವ್ಯವಸ್ಥೆಗೆ ಹೆಚ್ಚಿನ ಮಹತ್ವವಿದೆ. ಪತಿ-ಪತ್ನಿಯರು ತಮ್ಮ ಹೊಣೆಗಾರಿಕೆಯನ್ನು ಅರಿತು ಬದುಕನ್ನು ನಡೆಸುವಾಗ ಉತ್ತಮ ಕುಟುಂಬಗಳು ರೂಪುಗೊಳ್ಳುತ್ತದೆ ಎಂದು ಧರ್ಮಸ್ಧಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ಶ್ರೀಕ್ಷೇತ್ರ ಧರ್ಮಸ್ಧಳದಲ್ಲಿ 46ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ವಧೂ ವರರನ್ನು ಆಶೀರ್ವದಿಸಿ ಮಾತನಾಡಿದ ಅವರು, ಇಂದು ಮದುವೆತಯು ವಿವಿಧ ಸಂಪ್ರದಾಯಗಳ ಹೆಸರಿನಲ್ಲಿ ದುಂದು ವೆಚ್ಚಕ್ಕೆ ಕಾರಣವಾಗುತ್ತಿದೆ. ಈ ನಿಟ್ಟಿನಲ್ಲಿ ಸಾಮೂಹಿಕ ಸರಳ ವಿವಾಹಗಳಿಗೆ ಹೆಚ್ಚು ಮಹತ್ವ ನೀಡುವ ಅಗತ್ಯವಿದೆ. ಈ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ನಡೆಯಬೇಕಾಗಿದೆ. ಇಲ್ಲಿ ಅಂತರ್ಜಾತಿ ವಿವಾಹಗಳೂ ನಡೆಯುತ್ತಿದ್ದು, ಸರಕಾರದಿಂದ ಸೌಲಭ್ಯಗಳು ದೊರಕುವಂತೆ ನೋಡಿಕೊಳ್ಳಲಾಗುತ್ತಿದೆ ಎಂದರು.
ಬೆಳ್ತಂಗಡಿ ಶಾಸಕ ಕೆ.ವಸಂತ ಬಂಗೇರ ಮಾತನಾಡಿ, ಸಾಮೂಹಿಕ ವಿವಾಹದ ಮೂಲಕವಾಗಿ ಹೊಸ ಬದಲಾವಣೆಗಳಿಗೆ ಡಾ. ಹೆಗ್ಗಡೆಯವರು ಕಾರಣರಾಗಿದ್ದಾರೆ. ಇದನ್ನು ಎಲ್ಲರೂ ಮಾದರಿಯಾಗಿಸಬೇಕಾದ ಅಗತ್ಯವಿದೆ ಎಂದರು.
ಖ್ಯಾತ ಚಲನಚಿತ್ರ ನಟ ಯಶ್ ಮಾತನಾಡಿ, ವಿವಾಹವೆಂಬುದು ಸತಿಪತಿಯ ನಡುವಿನ ಮಾನಸಿಕ ಸಂಬಂಧವಾಗಿದೆ. ಅದು ಉತ್ತಮವಾಗಿದ್ದರೆ ಕೌಟುಂಬಿಕ ಜೀವನವೂ ಉತ್ತಮವಾಗಿರುತ್ತದೆ. ರಾಜ್ಯದಾದ್ಯಂತ ನೀರಿನ ಕೊರತೆ ಎದುರಾಗಿದ್ದು, ಕೆರೆಗಳನ್ನು ಉಳಿಸಲು ನೀರಿನ ಉಳಿಕೆಗೆ ಯುವಜನಾಂಗ ಮುಂದಾಗಬೇಕಾಗಿದೆ. ಎಲ್ಲವನ್ನೂ ಕೇವಲ ಸರಕಾರದ ಮೇಲೆ ಹೊರಿಸಿ ಸುಮ್ಮನಿದ್ದರೆ ಯಾವ ಕೆಲಸವೂ ಆಗದು. ಸರಕಾರದೊಂದಿಗೆ ಜನರೂ ಕೈಜೋಡಿಸುವ ಅಗತ್ಯವಿದೆ ಎಂದರು. ಡಾ ಹೆಗ್ಗಡೆಯವರು ಜನರ ಸಹಭಾಗಿತ್ವದ ಕಾರ್ಯಕ್ರಮಗಳನ್ನು ಅತ್ಯಂತ ಯಶಸ್ವಿಯಾಗಿ ನಡೆಸುತ್ತಿದ್ದು ಅದನ್ನು ಇತರರೂ ಅನುಸರಿಸಲಿ ಎಂದರು.
ಸಿಐಡಿಯ ಡಿಜಿಪಿ ಕಿಶೋರ್‌ಚಂದ್ರ, ಬಿರ್ಲಾ ಕಾರ್ಪೊರೇಶನ್‌ನ ಕಾರ್ಯನಿರ್ವಾಹಕ ಅಧ್ಯಕ್ಷ ಸಂದೀಪ್ ರಂಜನ್ ಬೋಸ್ ಶುಭ ಹಾರೈಸಿದರು.
ವೇದಿಕೆಯಲ್ಲಿ ಚಲನಚಿತ್ರನಟಿ, ಯಶ್ ಅವರ ಪತ್ನಿ ರಾಧಿಕಾ ಪಂಡಿತ್, ಶಾಸಕ ಅಭಯಚಂದ್ರ ಜೈನ್, ನಿವೃತ್ತ ಪೋಲೀಸ್ ಅಧಿಕಾರಿ ದಿವಾಕರ ಹೇಮಾವತಿ ಹೆಗ್ಗಡೆ, ಡಿ, ಹರ್ಷೇಂದ್ರಕುಮಾರ್ ಹಾಗೂ ಇತರರು ಉಪಸ್ಥಿತರಿದ್ದರು.
ಡಿ. ಸುರೇಂದ್ರ ಕುಮಾರ್ ಸ್ವಾಗತಿಸಿದರು, ಅಜಿತ್‌ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಶ್ರೀನಿವಾಸ ರಾವ್ ವಂದಿಸಿದರು.
ಈ ಬಾರಿಯ ಸಾಮೂಹಿಕ ವಿವಾಹದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ 96 ಜೋಡಿಗಳು ಹಾಗೂ ಕೇರಳದ 6 ಜೋಡಿ ಸೇರಿದಂತೆ 102 ಜೋಡಿಗಳು ವೈವಾಹಿಕ ಜೀವನ ಪ್ರವೇಶಿಸಿದರು. ಕೂಲಿ ಕಾರ್ಮಿಕರು, ಕೃಷಿಕರು, ಸರಕಾರಿ ಉದ್ಯೋಗಿಗಳು, ಸ್ವ ಉದ್ಯೋಗಿಗಳು ಸೇರಿದಂತೆ ವಿವಿಧ ಕೆಲಸಗಳನ್ನು ಮಾಡುವ ವಿವಿಧ ಜಾತಿಯ ವಧು-ವರರು ತಮ್ಮ ತಮ್ಮ ಸಂಪ್ರದಾಯಗಳಂತೆ ಗಣ್ಯರ ಸಮ್ಮುಖದಲ್ಲಿ ವಿವಾಹ ಜೀವನ ಆರಂಭಿಸಿದರು. 46 ವರ್ಷಗಳಲ್ಲಿ ಶ್ರೀ ಕ್ಷೇತ್ರದಲ್ಲಿ ನಡೆದಿರುವ ಸಾಮೂಹಿಕ ವಿವಾಹದಲ್ಲಿ ಒಟ್ಟು 12,029 ಮಂದಿ ವಿವಾಹವಾಗಿದ್ದಾರೆ.







