ಪೈವಳಿಕೆ: ಅಂಗಡಿಗೆ ನುಗ್ಗಿ ವ್ಯಾಪಾರಿಯನ್ನು ಕಡಿದು ಕೊಂದ ದುಷ್ಕರ್ಮಿಗಳು
.gif)
ಮಂಜೇಶ್ವರ, ಮೇ 4: ತಂಡವೊಂದು ಅಂಗಡಿಗೆ ನುಗ್ಗಿ ವ್ಯಾಪಾರಿಯೋರ್ವರನ್ನು ತಲವಾರಿನಿಂದ ಕಡಿದು ಹತ್ಯೆಗೈದ ಘಟನೆ ಪೈವಳಿಕೆ ಸಮೀಪದ ಚೇವಾರಿನಲ್ಲಿ ನಡೆದಿದೆ.
ಚೇವಾರು ಮಂಡೆಕಾಪಿನ ಜಿ.ಕೆ ಜನರಲ್ ಸ್ಟೋರ್ ನ ಮಾಲಕ ರಾಮಕೃಷ್ಣ(52) ಕೊಲೆಗೀಡಾದ ವ್ಯಾಪಾರಿ.
ಘಟನೆ ವಿವರ: ಕಾರಿನಲ್ಲಿ ಆಗಮಿಸಿದ ನಾಲ್ವರ ತಂಡವೊಂದು ರಾಮಕೃಷ್ಣನ್ ರ ಅಂಗಡಿಗೆ ತಲುಪಿದ್ದು, ಕಾರಿನಿಂದ ಇಳಿದ ಓರ್ವ ಸಿಗರೇಟ್ ಕೇಳಿದ್ದನೆನ್ನಲಾಗಿದೆ. ನಂತರ ಕಾರಿನಿಂದ ಇಳಿದ ಮೂವರು ಮಾವಿನಕಾಯಿ ಕೇಳಿದ್ದು, ರಾಮಕೃಷ್ಣ ಮಾವಿನ ಕಾಯಿ ತರಲೆಂದು ಕೋಣೆಯೊಂದಕ್ಕೆ ನುಗ್ಗಿದ ವೇಳೆ ದುಷ್ಕರ್ಮಿಗಳು ಅವರ ಮೇಲೆ ತಲವಾರಿನಿಂದ ದಾಳಿ ನಡೆಸಿದ್ದಾರೆ. ಬೊಬ್ಬೆ ಕೇಳಿ ಸ್ಥಳೀಯರು ತಲುಪುವಷ್ಟರಲ್ಲಿ ತಂಡ ಪರಾರಿಯಾಗಿದೆ.
ದಾಳಿಯಿಂದ ಗಂಭೀರ ಗಾಯಗೊಂಡಿದ್ದ ರಾಮಕೃಷ್ಣರಿಗೆ ಕುಂಬಳೆ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ. ಈ ಬಗ್ಗೆ ಕುಂಬಳೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಸರಗೋಡು ಪೋಲೀಸ್ ವರಿಷ್ಟಾಧಿಕಾರಿ ಕೆ.ಜಿ ಸೈಮನ್, ಡಿ.ವೈ.ಎಸ್.ಪಿ ಸುಕುಮಾರನ್ , ಕುಂಬಳೆ ಸಿಐವಿವಿ ಮನೋಜ್ , ಕುಂಬಳೆ ಎಸ್.ಐ ಜಯಶಂಕರ್ ನೇತೃತ್ವದ ಪೋಲೀಸ್ ತಂಡ ಘಟನಾ ಸ್ಥಳಕ್ಕೆ ಆಗಮಿಸಿ ಮಾಹಿತಿ ಸಂಗ್ರಹಿಸಿದ್ದಾರೆ.





