ಖ್ಯಾತ ರಂಗಭೂಮಿ ಕಲಾವಿದ ಕೊರಗಪ್ಪ ಶಿಂಗಾರಕೋಡಿ ನಿಧನ

ಬಂಟ್ವಾಳ, ಮೇ 4: ಖ್ಯಾತ ರಂಗಭೂಮಿ ಕಲಾವಿದ, ಕಿರುತೆರೆ ನಿರ್ದೇಶಕ ಕೊಲ್ನಾಡು ಗ್ರಾಮದ ಮಂಚಿ ಶಿಂಗಾರಕೋಡಿ ನಿವಾಸಿ ಕೊರಗಪ್ಪ ಶಿಂಗಾರಕೋಡಿ(51) ಹೃದಯಾಘಾತಕ್ಕೆ ಒಳಗಾಗಿ ನಿಧನರಾಗಿದ್ದಾರೆ.
ಇವರಿಗೆ ಗುರುವಾರ ಮಧ್ಯಾಹ್ನ ಎದೆನೋವು ಕಾಣಿಸಿಕೊಂಡಿದ್ದು ತಕ್ಷಣ ಅವರನ್ನು ದೇರಳಕಟ್ಟೆ ಆಸ್ಪತ್ರೆಯೊಂದಕ್ಕೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸಂಜೆಯ ವೇಳೆಗೆ ಅವರು ಕೊನೆಯುಸಿರೆಳೆದಿದ್ದಾರೆ. ಮೃತರು ಪತ್ನಿ ವಿಜಯಕುಮಾರಿ, ಮಕ್ಕಳಾದ ವೀಣಾ, ವಿಮಲೇಶ್ ಸೇರಿದಂತೆ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
ಸಾಮಾಜಿಕ ಕಳಕಳಿಯನ್ನೂ ಹೊಂದಿದ್ದ ಕೊರಗಪ್ಪ ಅವರು ಬಂಟ್ವಾಳ ಭೈರ ಸಂಘದ ಸ್ಥಾಪಕ ಕಾರ್ಯದರ್ಶಿಯಾಗಿಯೂ ಕಾರ್ಯ ನಿರ್ವಹಿಸಿದ್ದರು. ರಂಗಭೂಮಿಯಲ್ಲಿ ತನ್ನನ್ನು ತಾನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಅವರು ಮಂಚಿಯಲ್ಲಿ ಬೊಲ್ಪು ಕಲಾ ತಂಡವೊಂದನ್ನು ಸ್ಥಾಪಿಸಿದ್ದರು.
ನಾಟಕ, ಕಿರುತೆರೆಯ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದರು. ಕೆಲ ಸಮಯದ ಹಿಂದೆ ದೂರದರ್ಶನದಲ್ಲಿ ಇವರು ನಿರ್ದೇಶಿಸಿದ ’ಪಾಪದ ಪಿರವು’ ಧಾರವಾಹಿಯು ಪ್ರಸಾರಗೊಂಡಿತ್ತು. ಇಪ್ಪತ್ತಕ್ಕೂ ಹೆಚ್ಚು ಸಾಕ್ಷ್ಯ ಚಿತ್ರಗಳನ್ನು ನಿರ್ಮಿಸಿದ್ದ ಇವರ 'ಬೆಳಕು’, ’ತೆಂಕರ’ ಎಂಬ ಪುಸ್ತಕಗಳು ಪ್ರಕಟವಾಗಿದ್ದರೆ 'ಪಾಪದ ಪಿರವು’, 'ಮೂಲು ದಾನೆ ಇಂಚ’, 'ಬೈರನ ಬದ್‌ಕ್’ ಮೊದಲಾದ ನಾಟಕಗಳು ಜನಪ್ರಿಯಗೊಂಡಿದೆ.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಯುವಜನ ಕ್ರೀಡಾ ಇಲಾಖೆಯ ಪ್ರಶಸ್ತಿ ಸೇರಿದಂತೆ ಹಲವಾರು ಪುರಸ್ಕಾರಗಳು ಇವರಿಗೆ ಸಂದಿದೆ. ರಂಗಭೂಮಿ ಮಾತ್ರವಲ್ಲದೆ ಜಾನಪದ ಕ್ಷೇತ್ರದಲ್ಲೂ ಇವರು ಸಾಧನೆ ಮಾಡಿದ್ದಾರೆ. ಇವರ ಅಕಾಲಿಕ ನಿಧನಕ್ಕೆ ರಂಗಭೂಮಿ ಕಲಾವಿದರು ಸೇರಿದಂತೆ ಹಲವಾರು ಗಣ್ಯರು, ಸ್ಥಳೀಯ ಮುಖಂಡರು ಶೋಕ ವ್ಯಕ್ತಪಡಿಸಿದ್ದಾರೆ.







