ಮೇ 12ರಿಂದ ಆಸ್ಟ್ರೇಲಿಯ ಚಲನಚಿತ್ರೋತ್ಸವ
ಬೆಂಗಳೂರು, ಮೇ 4: ಆಸ್ಟ್ರೇಲಿಯ ಚಲನಚಿತ್ರೋತ್ಸವ ಮೇ 12ರಿಂದ 14ರವರೆಗೆ ನಗರದ ಮಲ್ಲೇಶ್ವರಂನಲ್ಲಿರುವ ಮಂತ್ರಿಮಾಲ್‌ನ ಐನಾಕ್ಸ್‌ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಆಸ್ಟ್ರೇಲಿಯ ರಾಯಭಾರಿ ಕೆಲ್ಲಿ ಇಂದಿಲ್ಲಿ ತಿಳಿಸಿದ್ದಾರೆ.
ನಗರದಲ್ಲಿಂದು ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಸ್ಟ್ರೇಲಿಯಾ ಚಲನಚಿತ್ರೋತ್ಸವವನ್ನು ಮೊದಲ ಬಾರಿ ಇಲ್ಲಿ ಮಾಡಲಾಗುತ್ತಿದೆ. ಈ ಮೂಲಕ ಸಂಸ್ಕೃತಿ ಪರಿಚಯಿಸುವುದು ಮತ್ತು ಪರಸ್ಪರ ಸೌಹಾರ್ದತೆ ಮೂಡಿಸುವ ಉದ್ದೇಶದಿಂದ ಚಿತ್ರೋತ್ಸವ ಮಾಡಲಾಗುತ್ತಿದೆ ಎಂದರು
ಆಸ್ಟ್ರೇಲಿಯಾ ಸಿನಿಮಾಗಳನ್ನು ಬೆಂಗಳೂರಿನ ಜನರಿಗೆ ಪರಿಚಯಿಸಲು ಆಸ್ಟ್ರೇಲಿಯ ಹಾಗೂ ಕನ್ನಡ ಚಲನಚಿತ್ರೋದ್ಯಮದ ನಡುವೆ ಸಹಕಾರವನ್ನು ವೃದ್ಧಿಸುವುದು ನಮ್ಮ ಉದ್ದೇಶವಾಗಿದೆ. ಹೀಗಾಗಿ ಕರ್ನಾಟಕ ಚಲನಚಿತ್ರ ಅಕಾಡಮಿಯ ಸಹಯೋಗದೊಂದಿಗೆ ಇದನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಚಿತ್ರೋತ್ಸವದಲ್ಲಿ ರೆಡ್ ಡಾಗ್ ಟ್ರೂ ಬ್ಲೂ, ಲಯನ್, ಡಾ ಡ್ರೆಸ್ ಮೇಕರ್, ಫೋರ್ಸ್ ಆಫ್ ಡೆಸ್ಟಿನಿ, ಡಾ ಸ್ಯಾಪೈರ್ಸ್, ಸ್ವರ್ವ್ ಮತ್ತು ಡರ್ಟಿ ಡೀಟ್ಸ್ ಎಂಬ ಆಸ್ಟ್ರೇಲಿಯಾ ಸಿನಿಮಾಗಳು ಪ್ರದರ್ಶನಗೊಳ್ಳುತ್ತಿದ್ದು, ಸಾರ್ವಜನಿಕರು ಉಚಿತವಾಗಿ ವೀಕ್ಷಿಸಬಹುದಾಗಿದೆ. ಇದಕ್ಕೆ ಸಂಬಂಧಿಸಿದ ಪಾಸ್‌ಗಳನ್ನು ಸಾರ್ವಜನಿಕರು ನಗರದ ಬಿಬಿಎಂಪಿ ಕಚೇರಿ ಎದುರು ಬಾದಾಮಿ ಹೌಸ್‌ನಲ್ಲಿನ ಅಕಾಡೆಮಿ ಕಚೇರಿಯಲ್ಲಿ, ಮಲ್ಲೇಶ್ವರದ ಐನಾಕ್ಸ್ ಮತ್ತು ಮಂತ್ರಿ ಸ್ಕೈಯರ್‌ಗಳಲ್ಲಿ ಪಡೆದುಕೊಳ್ಳಬಹುದಾಗಿದೆ ಎಂದು ಮಾಹಿತಿ ನೀಡಿದರು. ಈ ವೇಳೆ ಅಕಾಡಮಿಯ ಅಧ್ಯಕ್ಷ ರಾಜೇಂದ್ರಸಿಂಗ್ ಬಾಬು ಉಪಸ್ಥಿತರಿದ್ದರು.







