ನಾನು ಭಿನ್ನಮತೀಯ ನಾಯಕನಲ್ಲ: ಪದ್ಮನಾಭ ಭಟ್
ಬಿಎಸ್ ಯಡಿಯೂರಪ್ಪ ವಿರುದ್ಧ ಅಸಮಾಧಾನ
ಶಿವಮೊಗ್ಗ, ಮೇ 4: ಮಾಧ್ಯಮಗಳಲ್ಲಿ ತನ್ನನ್ನು ಭಿನ್ನಮತೀಯ ಎಂದು ಬಿಂಬಿಸಲಾಗುತ್ತಿದೆ. ಭಿನ್ನಮತದ ಪ್ರಶ್ನೆಯೇ ಇಲ್ಲ. ತಾನು ಎಂದೂ ಸ್ಥಾನಮಾನಕ್ಕಾಗಿ ಬಯಸಿಲ್ಲ ಎಂದು ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ (ಎಂಎಡಿಬಿ)ಯ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಪದ್ಮನಾಭ ಭಟ್ ತಿಳಿಸಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನು ದ್ದೇಶಿಸಿ ಮಾತನಾಡಿದ ಅವರು, ಭಾರತೀಯ ಜನತಾಪಕ್ಷ ಎಂದರೆ ಶಿಸ್ತು, ಪ್ರಾಮಾಣಿಕತೆಗೆ ಹೆಸರಾಗಿತ್ತು. ಜನರೂ ಕೂಡ ವಿಶ್ವಾಸವಿಟ್ಟಿದ್ದರು. 2008ರಲ್ಲಿ ಪಕ್ಷ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗ ಸಾಕಷ್ಟು ನಿರೀಕ್ಷೆಯನ್ನು ಮತದಾರರು ಹೊಂದಿದ್ದರು. ಆದರೆ, ಅಶಿಸ್ತು ಪ್ರಾರಂಭವಾಗಿ ಪಕ್ಷದೊಳಗೆ ಕಚ್ಚಾಟ ಮತ್ತು ಭ್ರಷ್ಟಾಚಾರದ ಪರಿಣಾಮ ಮತದಾರರು ಬಿಜೆಪಿಯ ಮೇಲೆ ವಿಶ್ವಾಸ ಕಳೆದುಕೊಂಡರು ಎಂದು ಬೇಸರ ವ್ಯಕ್ತಪಡಿಸಿದರು.
ಪಕ್ಷ ಸಂಘಟನೆಗಾಗಿ ಹೋರಾಟ ನಡೆಸಿದ ಯಡಿಯೂರಪ್ಪಬಿಜೆಪಿ ಹೊಡೆದು ಕೆಜೆಪಿ ಹುಟ್ಟು ಹಾಕಿದರು.
ಈ ಸಂದರ್ಭದಲ್ಲಿ ತಮಗೂ ಕೆಜೆಪಿ ಸೇರುವಂತೆ ಆಹ್ವಾನ ನೀಡಿದ್ದರೂ ತಾವು ಬಿಜೆಪಿ ತೊರೆಯಲಿಲ್ಲ. ಕೆಜೆಪಿ ಕಟ್ಟಿದ ಯಡಿಯೂರಪ್ಪ ಇನ್ನೆಂದು ಬಿಜೆಪಿಗೆ ಹೋಗುವುದಿಲ್ಲ. ರಕ್ತದಲ್ಲಿ ಬರೆದುಕೊಡುತ್ತೇನೆ ಎಂದಿದ್ದರು. ಸಂಘ ಪರಿವಾರ ಹಾಗೂ ಬಿಜೆಪಿ ಕಾರ್ಯಕರ್ತರ ವಿರುದ್ಧ ಹೇಳಿಕೆಗಳನ್ನು ನೀಡಿದ್ದರು. 40 ಸ್ಥಾನಗಳಲ್ಲಿ ಗೆಲವು ಪಡೆಯುತ್ತೇವೆ. ತಮ್ಮನ್ನು ಬಿಟ್ಟು ಯಾರೂ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಕಾಂಗ್ರೆಸ್ ಹಾಗೂ ಬಿಜೆಪಿಗೂ ನನ್ನ ಅನಿವಾರ್ಯತೆ ಬೇಕು ಎಂಬ ಹೇಳಿಕೆ ನೀಡಿದ್ದರು. ಆದರೆ ಅವರು ಗಳಿಸಿದ್ದು, ಕೇವಲ 6 ಸ್ಥಾನಗಳು. ಅದು ಕೂಡ ಅವರವರ ಸ್ವಂತ ಬಲದ ಮೇಲೆ ಗೆದ್ದು ಬಂದವರಾಗಿದ್ದಾರೆ ಎಂದು ಛೇಡಿಸಿದರು.
ಪಕ್ಷದಲ್ಲಿ ಉಂಟಾಗಿರುವ ಕೆಲವು ಬಿಕ್ಕಟ್ಟುಗಳನ್ನು ಸರಿಪಡಿಸಬೇಕು ಎಂದು ಬಿಜೆಪಿ ಉಳಿಸೋಣ ಸಮಾವೇಶ ಹಮ್ಮಿಕೊಳ್ಳಲಾಯಿತು. ಇದಕ್ಕೂ ಹಾಗೂ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ಗೂ ಯಾವುದೇ ಸಂಬಂಧವಿಲ್ಲ. ನಾವೆಲ್ಲರೂ ಪ್ರಾಮಾಣಿಕ ಬಿಜೆಪಿ ಕಾರ್ಯಕರ್ತರಾಗಿದ್ಧೇವೆ. ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತದೆ ಎನ್ನುವ ಸಂದರ್ಭದಲ್ಲಿ ಪಕ್ಷದಲ್ಲಿ ಗೊಂದಲ ಸೃಷ್ಠಿಯಾಗಿರುವುದು ಒಳ್ಳೆಯ ಬೆಳವಣಿಗೆ ಅಲ್ಲ. ಇದನ್ನು ಸರಿಪಡಿಸಿಕೊಂಡು ಹೋಗಬೇಕಿದೆ ಎಂದರು.
ತನ್ನ ವಿರುದ್ಧ ರೇಣುಕಾಚಾರ್ಯ, ಚಾರಿತ್ರ್ಯ ಹೀನರು, ತತ್ವಹೀನರು ಎಂದು ಹೇಳಿಕೆ ನೀಡಿದ್ದಾರೆ. ರೇಣುಕಾಚಾರ್ಯರಂತಹ ವ್ಯಕ್ತಿಯಿಂದ ಪಾಠ ಕಲಿಯಬೇಕಾದ ಆವಶ್ಯಕತೆ ಇಲ್ಲ. ನನ್ನ ರಾಜಕೀಯ ಜೀವನದಲ್ಲಿ ಒಂದು ಕಪ್ಪುಚುಕ್ಕೆ ಇಲ್ಲ. ಹೇಳಿಕೆ ನೀಡುವಾಗ ಯೋಚಿಸಬೇಕು ಎಂದು ತಿರುಗೇಟು ನೀಡಿದರು.







