ಭಾರತೀಯ ಕ್ರಿಕೆಟ್ ತಂಡದ ಹೊಸ ಜರ್ಸಿ ಅನಾವರಣ

ಮುಂಬೈ, ಮೇ 4: ಬಿಸಿಸಿಐ ಸಿಇಒ ರಾಹುಲ್ ಜೊಹ್ರಿ ಗುರುವಾರ ಟೀಮ್ ಇಂಡಿಯಾದ ಹೊಸ ಜರ್ಸಿಯನ್ನು ಅನಾವರಣಗೊಳಿಸಿದರು. ತಂಡದ ಅಧಿಕೃತ ಪ್ರಾಯೋಜಕತ್ವದ ಹಕ್ಕು ಪಡೆದಿರುವ ಚೀನಾದ ಮೊಬೈಲ್ ಕಂಪನಿ ಒಪ್ಪೊ ಹೆಸರನ್ನು ಜರ್ಸಿಯ ಮುಂಭಾಗದಲ್ಲಿ ಬರೆಯಲಾಗಿದೆ. ಜರ್ಸಿ ಅನಾವರಣದ ಕಾರ್ಯಕ್ರಮದಲ್ಲಿ ಚೀನಾ ಕಂಪನಿಯ ಉನ್ನತಾಧಿಕಾರಿಗಳು ಉಪಸ್ಥಿತರಿದ್ದರು.
ಜೂ.1 ರಿಂದ ಇಂಗ್ಲೆಂಡ್‌ನಲ್ಲಿ ಆರಂಭವಾಗಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತೀಯ ಪುರುಷರ ಕ್ರಿಕೆಟ್ ತಂಡ ಹೊಸ ನೀಲಿಬಣ್ಣದ ಜರ್ಸಿ ಧರಿಸಿ ಆಡಲಿದೆ. ಒಪ್ಪೊ ಹಾಗೂ ಬಿಸಿಸಿಐ 1,079 ಕೋ.ರೂ.ಗೆ ಐದು ವರ್ಷಗಳ ಅವಧಿಗೆ ತಂಡದ ಪ್ರಾಯೋಜಕತ್ವ ಒಪ್ಪಂದಕ್ಕೆ ಸಹಿ ಹಾಕಿದ್ದವು. ಒಪ್ಪಂದದ ವಿಷಯವನ್ನು ಮಾ.7 ರಂದು ಬಿಸಿಸಿಐ ಘೋಷಿಸಿತ್ತು. ಎ.1 ರಿಂದ ಒಪ್ಪಂದದ ಅವಧಿ ಆರಂಭವಾಗಿದೆ.
ಒಪ್ಪೊ ಐದು ವರ್ಷಗಳ ಅವಧಿಗೆ 1,079 ಕೋ.ರೂ. ಬಿಡ್ ಸಲ್ಲಿಸಿದ್ದು, ಇದು ಕಳೆದ ಬಿಡ್(ಸ್ಟಾರ್ ಇಂಡಿಯಾ)ಮೊತ್ತಕ್ಕಿಂತ ಐದು ಪಟ್ಟು ಹೆಚ್ಚಾಗಿದೆ. ವಿವೋ ಕಂಪೆನಿಯು 768 ಕೋ.ರೂ. ಬಿಡ್ ಸಲ್ಲಿಸಿತ್ತು ಎಂದು ಜೊಹ್ರಿ ಮಾ.7 ರಂದು ಹೇಳಿಕೆಯೊಂದರಲ್ಲಿ ತಿಳಿಸಿದ್ದರು.





