ಪುಣೆಯ ಉದಯೋನ್ಮುಖ ಆಟಗಾರ ರಾಹುಲ್ ತ್ರಿಪಾಠಿ

ಪುಣೆ, ಮೇ 4: ರಾಹುಲ್ ತ್ರಿಪಾಠಿ ಈವರ್ಷ ಅಂತರ್-ರಾಜ್ಯ ಹಾಗೂ ಅಂತರ್-ವಲಯ ಮಟ್ಟದ ಟ್ವೆಂಟಿ-20 ಟೂರ್ನಿಯಲ್ಲಿ ಆಯ್ಕೆಯಾಗಿರಲಿಲ್ಲ. ವಿಜಯ ಹಝಾರೆ ಟ್ರೋಫಿ ಏಕದಿನ ಟೂರ್ನಿಯ ಮೊದಲ ನಾಲ್ಕು ಪಂದ್ಯಗಳಲ್ಲಿ ಮಹಾರಾಷ್ಟ್ರ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ತ್ರಿಪಾಠಿ ಈವರ್ಷ ನಡೆದಿದ್ದ ಐಪಿಎಲ್ ಆಟಗಾರರ ಹರಾಜಿನ ಕೊನೆಯ ಕ್ಷಣದಲ್ಲಿ ಪುಣೆ ತಂಡಕ್ಕೆ ಹರಾಜಾಗಿದ್ದರು.
ಚೊಚ್ಚಲ ಐಪಿಎಲ್ ಟೂರ್ನಿ ಆಡಿದ್ದ ತ್ರಿಪಾಠಿ ಪುಣೆ ತಂಡ ಈ ವರ್ಷ ಆಡಿದ್ದ ಮೊದಲೆರಡು ಪಂದ್ಯಗಳಲ್ಲಿ ಆಡಿರಲಿಲ್ಲ. ಮೂರನೆ ಪಂದ್ಯದಲ್ಲಿ ಮೊದಲ ಬಾರಿ ಅವಕಾಶ ಪಡೆದಿದ್ದರು. ಡೆಲ್ಲಿ ವಿರುದ್ಧ 4ನೆ ಕ್ರಮಾಂಕದಲ್ಲಿ ಆಡಿದ್ದ ತ್ರಿಪಾಠಿ 5 ಎಸೆತಗಳಲ್ಲಿ 10 ರನ್ ಗಳಿಸಿದ್ದರು. ಮುಂದಿನ ಪಂದ್ಯದಲ್ಲಿ ಅಜಿಂಕ್ಯ ರಹಾನೆಯೊಂದಿಗೆ ಇನಿಂಗ್ಸ್ ಆರಂಭಿಸಿದ್ದ ತ್ರಿಪಾಠಿ ನಿಧಾನವಾಗಿ ಬ್ಯಾಟಿಂಗ್ ಲಯ ಕಂಡು ಕಂಡರು. 8 ಇನಿಂಗ್ಸ್‌ಗಳಲ್ಲಿ 2 ಅರ್ಧಶತಕ ಸಿಡಿಸಿ ಉತ್ತಮ ಪ್ರದರ್ಶನ ನೀಡಿದ್ದರು.
ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಅದರದೇ ನೆಲದಲ್ಲಿ 52 ಎಸೆತಗಳಲ್ಲಿ 93 ರನ್ ಗಳಿಸಿದ ತ್ರಿಪಾಠಿ ಪುಣೆ ತಂಡಕ್ಕೆ ಅನಿರೀಕ್ಷಿತ ಗೆಲುವು ತಂದರು. ರಾತೋರಾತ್ರಿ ಹೀರೋವಾಗಿ ಹೊರಹೊಮ್ಮಿದರು.
ತ್ರಿಪಾಠಿ ಈವರ್ಷದ ಐಪಿಎಲ್‌ನಲ್ಲಿ ಪವರ್ ಪ್ಲೇ ವೇಳೆ ಗರಿಷ್ಠ ಸ್ಕೋರ್(144 ಎಸೆತ, 251 ರನ್) ಗಳಿಸಿದ ಸಾಧನೆ ಮಾಡಿದರು. ಡೇವಿಡ್ ವಾರ್ನರ್(238 ರನ್, 160 ಎಸೆತ) ದಾಖಲೆ ಮುರಿದರು.
ಕೋಲ್ಕತಾ ವಿರುದ್ಧ 23 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ತ್ರಿಪಾಠಿ ಪುಣೆ ತಂಡದ ಪರ ಅತ್ಯಂತ ವೇಗವಾಗಿ 50 ರನ್ ಗಳಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡರು.
ಸೈನಿಕನೊಬ್ಬನ ಪುತ್ರನಾಗಿ ರಾಂಚಿಯಲ್ಲಿ ಜನಿಸಿ ಮಹಾರಾಷ್ಟ್ರದಲ್ಲಿ ಬೆಳೆದಿರುವ ತ್ರಿಪಾಠಿ ಅವರ ಇನಿಂಗ್ಸ್ ಕೂಡ ಶಿಸ್ತುಬದ್ಧವಾಗಿದೆ.







