ಮೇ 8: ಒಳಮೀಸಲಾತಿಗೆ ಆಗ್ರಹಿಸಿ ಅರೆಬೆತ್ತಲೆ ಮೆರವಣಿಗೆ
ತುಮಕೂರು, ಮೇ 4: ನ್ಯಾ.ಎ.ಜೆ.ಸದಾಶಿವ ಆಯೋಗ ವರದಿಯನ್ನು ನಿರ್ಲಕ್ಷಿಸಿರುವ ರಾಜ್ಯ ಸರಕಾರದ ವಿರುದ್ಧ ಮೇ 8ರಂದು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಮಾದಿಗ ದಂಡೋರ ಮತ್ತು ಮಾದಿಗ ಮೀಸಲಾತಿ ಹೋರಾಟ ಸಮಿತಿ ವತಿಯಿಂದ ಬೃಹತ್ ಅರೆಬೆತ್ತಲೆ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಮಾದಿಗ ದಂಡೋರ ರಾಜ್ಯ ವಕ್ತಾರ ಎಂ.ವಿ.ರಾಘವೇಂದ್ರಸ್ವಾಮಿ ತಿಳಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ನಡೆದ ಸಭೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಪರಿಶಿಷ್ಟರಲ್ಲಿಯೇ ಮೀಸಲಾತಿಯನ್ನು ಜನಸಂಖ್ಯಾವಾರು ಹಂಚಿಕೆಗೆ ಸಂಬಂಧಪಟ್ಟ ಹಿನ್ನೆಲೆಯಲ್ಲಿ ಎಸ್.ಎಂ.ಕೃಷ್ಣ ಅವರ ಸರಕಾರವಿದ್ದಾಗ ನೇಮಕ ಮಾಡಿದ ಸಮಿತಿ 2012ರಲ್ಲಿ ವರದಿ ನೀಡಿದ್ದರೂ ಇದುವರೆಗೆ ವಿಧಾನಸಭೆಯಲ್ಲಿ ಚ್ಪರ್ಚಿಸಿ ಕೇಂದ್ರಕ್ಕೆ ಶಿಫಾರಸ್ಸು ಕಳುಹಿಸಿಲ್ಲ. ಈ ಹಿನ್ನೆಲೆಯಲ್ಲಿ ಹಲವಾರು ಹೋರಾಟ ನಡೆಸಿದ್ದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಸರಕಾರದ ಗಮನ ಸೆಳೆಯಲು ಮೇ 8ರಂದು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಅರೆ ಬೆತ್ತಲೆ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ.ಪ್ರತಿಭಟನೆಯಲ್ಲಿ ಎಲ್ಲಾ ಪ್ರಗತಿಪರ ಸಂಘಟನೆಗಳು ಭಾಗವಹಿಸಲಿವೆ ಎಂದು ರಾಘವೇಂದ್ರಸ್ವಾಮಿ ತಿಳಿಸಿದ್ದಾರೆ.
ಈ ವೇಳೆ ಮಾದಿಗ ದಂಡೋರದ ಕುಮಾರ್ ಬಂಡೆ,ವೆಂಕಟೇಶ್(ಜೆಸಿಬಿ), ಕೆಂಪರಾಜು, ಅಂಚಿಹಳ್ಳಿ ರಾಮಸ್ವಾಮಿ, ಗೂಳಹರಿವೆ ನಾಗರಾಜು, ಜಯಚಂದ್ರ, ಶಿವಾಜಿ ಮತ್ತಿತರರು ಉಪಸ್ಥಿತರಿದ್ದರು.





