ಸುಪ್ರೀಂ ಕೋರ್ಟಿನ ಪಬ್ಲಿಕ್ ಪ್ರಾಸಿಕ್ಯೂಟರ್ ಎಂದು ತಿರುಗುತ್ತಿದ್ದ ವಕೀಲನ ಬಂಧನ

ಪರವೂರ್, ಮೇ 5: ಸುಪ್ರೀಂಕೋರ್ಟಿನ ಸೆಂಟ್ರಲ್ ಸ್ಪೆಶಲ್‌ಪಬ್ಲಿಕ್ ಪ್ರಾಸಿಕ್ಯೂಟರ್ ಎಂದು ಸುಳ್ಳು ಹೇಳಿ ಕೆಂಪುಗೂಟ ಮತ್ತು ಬೋರ್ಡನ್ನು ಬಳಸಿದ ನೆಯ್‌ಶೇರಿ ಇಳಂತಿಕರ ಎನ್ನುವಲ್ಲಿನ ನಿವಾಸಿ ವಕೀಲ ಎನ್.ಜೆ. ಪ್ರಿನ್ಸ್‌ನನ್ನು(44) ಬಂಧಿಸಲಾಗಿದೆ.
ಈತನ ಮನೆಯಲ್ಲಿ ತಪಾಸಣೆ ನಡೆಸಿದಾಗ ಕಾರಿನ ಕೆಂಪುಗೂಟ, ಮನೆಯ ಮುಂಭಾಗದಲ್ಲಿದ್ದ ಸುಪ್ರೀಂಕೋರ್ಟು ಸೆಂಟ್ರಲ್ ಸ್ಪೇಷಲ್ ಪ್ರಾಸಿಕ್ಯೂಟರ್ ಬೋರ್ಡ್ ಪತ್ತೆಯಾಗಿದ್ದು, ಅದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಸ್ಪೆಷಲ್ ಪ್ರಾಸಿಕ್ಯೂಟರ್ ಎನ್ನುವ ಬೋರ್ಡು ಹಾಕಲಾಗಿದ್ದ ಈತನ ಕಾರನ್ನು ಪೊಲೀಸರು ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಪರವೂರಿನ ಕೆಎಸ್ಸಾರ್ಟಿಸಿ ನಿಲ್ದಾಣದ ಬಳಿಯ ಈತನ ಕಚೇರಿಯಲ್ಲಿಯೂ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಮೂರು ತಿಂಗಳ ಹಿಂದೆಯಷ್ಟೇ ತನಗೆ ಸೆಂಟ್ರಲ್ ಸ್ಪೆಷಲ್ ಪ್ರಾಸಿಕ್ಯೂಟರ್ ನೇಮಕಾತಿ ದೊರಕಿದೆ ಎನ್ನುವ ಸುಳ್ಳು ಪ್ರಚಾರವನ್ನು ಆರಂಭಿಸಿದ್ದ ಈತ ನಂತರ ತನ್ನ ಕಾರಿಗೆ ಕೆಂಪುಗೂಟ ಉಪಯೋಗಿಸಲು ಆರಂಭಿಸಿದ್ದಾನೆ. ಕೆಂಪುಗೂಟಕ್ಕೆ ಕೇಂದ್ರ ಸರಕಾರ ನಿಷೇಧ ಹೇರಿದ ಮೇಲೆಯೂ ಅದನ್ನು ಬಳಸುತ್ತಿರುವುದು ಕಂಡು ಬಂದಾಗ ಈತನ ವಿರುದ್ಧ ತನಿಖೆ ನಡೆಸಲಾಯಿತು. ಕಾರು ಪರವೂರ್ ಕೋರ್ಟಿನ ಪರಿಸರದಲ್ಲಿದೆ ಎಂದು ತಿಳಿದು ವಕೀಲ ಪ್ರಿನ್ಸ್‌ನನ್ನು ಹಿಂಬಾಲಿಸಿ ವಶಕ್ಕೆ ಪಡೆದು ತನಿಖೆ ನಡೆಸಿದಾಗ ವಕೀಲನ ಮೋಸ ಬಹಿರಂಗವಾಗಿತ್ತು. ಸರಕಾರಿ ಚಿಹ್ನೆಗಳು, ಪದವಿಯನ್ನು ದುರುಪಯೋಗಿಸಿದ್ದಾನೆ ಎಂದು ಪ್ರಿನ್ಸ್ ವಿರುದ್ಧ ಪೊಲೀಸರು ಕೇಸುದಾಖಲಿಸಿದ್ದಾರೆ.